

ಶಿಗ್ಗಾಂವಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ. ಮೊಮ್ಮಗನ ಚುನಾವಣೆಗಾಗಿ ಏನೇನೋ ಹೇಳುತ್ತಿದ್ದಾರೆ. ಇನ್ನೊಬ್ಬ ಮೊಮ್ಮಗನ ವಿಚಾರದಲ್ಲಿ ಗೌಡರಿಗೆ ಕಣ್ಣಲ್ಲಿ ನೀರು ಬರಲೇ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಮಾರ್ಮಿಕವಾಗಿ ನುಡಿದರು.
ಶಿಗ್ಗಾಂವಿ ತಾಲೂಕು ದುಂಡಸಿ ಪ್ರಚಾರ ರ‌್ಯಾಲಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರವನ್ನು ಡಿಕೆಶಿ ಲೂಟಿ ಮಾಡಿದ್ದಾರೆ ಎಂಬ ದೇವೇಗೌಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನೇನಾದರೂ ಲೂಟಿ ಮಾಡಿದ್ದರೆ ನನ್ನ ಕ್ಷೇತ್ರದ ಜನರು 8 ಬಾರಿ ನನ್ನ ಆಯ್ಕೆ ಮಾಡುತ್ತಿದ್ದರಾ? ದೇವೇಗೌಡರ ಸುಪುತ್ರ ಕುಮಾರಸ್ವಾಮಿ ಅವರ ವಿರುದ್ಧವೂ ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನ ಕ್ಷೇತ್ರದ ಜನರು ನನಗೆ ದೇವರು ಇದ್ದಂತೆ. ಅವರ ಬದುಕಿನಲ್ಲಿ ಬದಲಾವಣೆ ತರಲು ಶ್ರಮ ಪಡುತ್ತಾ ಇದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ ಎಂದು ಮಹಾರಾಷ್ಟ್ರದ ಆಡಳಿತರೂಢ ಪಕ್ಷಗಳು ಸುಳ್ಳು ಹೇಳುತ್ತಿವೆ. ಅಲ್ಲಿನ ಮಹಾಯುತಿ ಸರ್ಕಾರದ ಬಿಜೆಪಿ, ಶಿವಸೇನಾ (ಶಿಂಧೆ ಬಣ) ಎನ್‌ಸಿಪಿ (ಅಜಿತ್ ಪವಾರ ಬಣ) ಎಂಎಲ್ಎಗಳಿಗೆ ಕರ್ನಾಟಕಕ್ಕೆ ಭೇಟಿ ಮಾಡಲು ಬಸ್ ಅಥವಾ ವಿಶೇಷ ವಿಮಾನ ವ್ಯವಸ್ಥೆ ಮಾಡುತ್ತೇನೆ. ಅವರು ನೇರವಾಗಿ ಬಂದು ಜನರನ್ನು ಕೇಳಬಹುದು. ಜತೆಗೆ ಬಿಜೆಪಿ ಕಾರ್ಯಕರ್ತರ ಬಳಿಯೂ ಅಭಿಪ್ರಾಯ ತಿಳಿದುಕೊಳ್ಳಬಹುದು ಎಂದು ಸವಾಲು ಹಾಕಿದರು.
ಮಹದಾಯಿಗೆ ಅನುಮತಿ ಕೊಡಿಸಲಿಲ್ಲ
ಬೊಮ್ಮಾಯಿ ಮಹದಾಯಿ ಯೋಜನೆಗೆ ಅನುಮತಿ ಸಿಕ್ಕೇಬಿಟ್ಟಿತು ಎಂದು ಪಟಾಕಿ ಹೊಡೆದು ಸಂಭ್ರಮಿಸಿದರು. ಆದರೆ, ಇದಕ್ಕೆ ಕೇಂದ್ರ ಪರಿಸರ ಇಲಾಖೆಯವರು ಇನ್ನೂ ಅನುಮತಿ ಕೊಟ್ಟಿಲ್ಲ. ಬಿಜೆಪಿಯಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿದರು. ಇದುವರೆಗೂ ಸಾಮಾನ್ಯ ಜನರ ಬದುಕಿಗೆ ಯಾವ ಸಹಾಯವನ್ನೂ ಬಿಜೆಪಿ ಮಾಡಿಲ್ಲ ಎಂದು ಡಿಕೆಶಿ ಟೀಕಿಸಿದರು.
ಬೆಣ್ಣೆ ಹಳ್ಳಕ್ಕೆ 200 ಕೋಟಿ
ಶಿಗ್ಗಾಂವಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ 60 ಕೋಟಿ ಕೊಟ್ಟಿದ್ದೇವೆ. ಇತರೇ ಕ್ಷೇತ್ರಗಳ ಅಭಿವೃದ್ದಿಗೆ 100 ಕೋಟಿ ವಿಶೇಷ ಅನುದಾನ ನೀಡಲಾಗಿದೆ. ದುಂಡಸಿ ಗ್ರಾಮದಲ್ಲಿ ಹರಿಯುವ ಬೆಣ್ಣೆಹಳ್ಳಕ್ಕೆ ನಮ್ಮ ಸರ್ಕಾರ 200 ಕೋಟಿ ಕೊಟ್ಟಿದೆ. ಇದರಿಂದ 16 ಟಿಎಂಸಿಯಷ್ಟು ನೀರು ಸಂಗ್ರವಾಗುತ್ತಿದೆ. ಈ ಕೆಲಸವನ್ನು ಈ ಹಿಂದೆ ನೀರಾವರಿ ಸಚಿವರಾಗಿದ್ದ ಬೊಮ್ಮಾಯಿ ಮಾಡಬೇಕಾಗಿತ್ತು. ಆದರೆ, ನಮ್ಮ ಸರ್ಕಾರ ಮಾಡಿದೆ ಎಂದರು ಡಿಕೆಶಿ.
ಬೊಮ್ಮಾಯಿ, ಸೋಮಣ್ಣ ಸಮಿತಿಯ ಸದಸ್ಯರೇ ?
ವಕ್ಫ್ ವಿಚಾರವಾಗಿ ಜೆಪಿಸಿ (ಜಂಟಿ ಪಾರ್ಲಿಮೆಂಟ್ ಸಮಿತಿ) ರಾಜ್ಯಕ್ಕೆ ಭೇಟಿ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ಯಾವ ಜಂಟಿ ಪಾರ್ಲಿಮೆಂಟ್ ಸಮಿತಿ ಎನ್ನುವುದು ಇಲ್ಲ. ಕೇವಲ ಬಿಜೆಪಿಯ ನಾಯಕರು ಭೇಟಿ ಕೊಟ್ಟಿದ್ದಾರೆ. ಬೊಮ್ಮಾಯಿ, ಸೋಮಣ್ಣ ಆ ಸಮಿತಿಯಲ್ಲಿ ಇದ್ದಾರೆಯೇ? ತೇಜಸ್ವಿ ಸೂರ್ಯ ರಾಜಕೀಯಕ್ಕಾಗಿ ಹೆಲಿಕಾಪ್ಟರ್ ಅಲ್ಲಿ ಬಂದು ಹೋಗಿದ್ದಾರೆ. ಸಮಿತಿ ಭೇಟಿಯ ಬಗ್ಗೆ ಯಾವುದಾದರೂ ಅಧಿಕಾರಿಗಳಿಗೆ ತಿಳಿಸಿದ್ದಾರೆಯೇ? ಭೇಟಿ ಮಾಡಿ ಎಂದು ಯಾರಾದರೂ ಮನವಿ ಮಾಡಿದ್ದರೇ?. ಬಿಜೆಪಿ ಕಾಲದಲ್ಲಿಯೇ ಎಲ್ಲ ಪಹಣಿಗಳನ್ನು ಬದಲಾವಣೆ ಮಾಡಲಾಯಿತು. ಶೀಘ್ರದಲ್ಲಿಯೇ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದರು.
ಬಿಜೆಪಿ 2010 ರಲ್ಲಿಯೇ ವಕ್ಫ್ ಬಗ್ಗೆ ಸುತ್ತೋಲೆ ಹೊರಡಿಸಿತ್ತು ಎಂದು ಕೇಳಿದಾಗ 2010 ಸೇರಿದಂತೆ 2020ರಲ್ಲಿಯೂ ಎಲ್ಲ ಪಹಣಿಗಳನ್ನು ಬದಲಾಯಿಸಿದ್ದೇ ಬಿಜೆಪಿ. ಎಲ್ಲ ದಾಖಲೆಗಳು ನಮ್ಮ ಬಳಿಯಿದೆ. ಧಾರವಾಡದಲ್ಲಿಯೂ ಇವೆ ಎಲ್ಲವನ್ನೂ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.