ಸಿಎಂ ವಿರುದ್ಧ ಯುಸೂಫ್ ಸವಣೂರ ಸ್ಪರ್ಧೆ; ಮತ್ತೊಮ್ಮೆ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕೆ

Yusuf savanur
Published on

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ತನ್ನ ಅಭ್ಯರ್ಥಿ ಹೆಸರು ಘೋಷಣೆ ಮಾಡಲು ಮೀನಮೇಷ ಎಣಿಸುತ್ತಿದ್ದ ಕಾಂಗ್ರೆಸ್ ಕೊನೆಗೂ ಮಂಗಳವಾರ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಸಿಎಂ ವಿರುದ್ಧ ನಾಲ್ಕನೇ ಬಾರಿಯೂ ಅಲ್ಪಸಂಖ್ಯಾತ ಹುರಿಯಾಳನ್ನು ಕಣಕ್ಕಿಳಿಸಿದೆ.
ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಯೂಸೂಫ್ ಸವಣೂರ ಅವರನ್ನು ಶಿಗ್ಗಾಂವಿ ಕ್ಷೇತ್ರದ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದೆ. ಮಾಜಿ ಸಚಿವ ವಿನಯ ಕುಲಕರ್ಣಿ, ಅಜೀಮ್‌ಪೀರ್ ಖಾದ್ರಿ, ಶಶಿಧರ ಯಲಿಗಾರ, ರಾಜೇಶ್ವರಿ ಪಾಟೀಲ, ಸೇರಿದಂತೆ 15 ಜನರ ಹೆಸರು ರೇಸ್‌ನಲ್ಲಿತ್ತು. ನಾಮಪತ್ರ ಸಲ್ಲಿಸಲು ಎರಡೇ ದಿನ ಬಾಕಿ ಇರುವಾಗ ಕಾಂಗ್ರೆಸ್ ಯುಸೂಫ್ ಸವಣೂರಗೆ ಟಿಕೆಟ್ ಘೋಷಿಸಿದೆ. ಇದರಿಂದ ಕೆಲ ಆಕಾಂಕ್ಷಿಗಳು ಬಂಡಾಯ ಏಳುವ ಸಾಧ್ಯತೆಯೂ ಇದೆ.
ಏ.19ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಸಿಎಂ ನಾಮಪತ್ರ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದೆ. ಈ ಮೂಲಕ ಶಿಗ್ಗಾಂವಿ ಚುನಾವಣಾ ಕುಸ್ತಿ ಅಖಾಡಕ್ಕೆ ಕಾಂಗ್ರೆಸ್ ತನ್ನ ಪೈಲ್ವಾನ್‌ರನ್ನು ಸಜ್ಜುಗೊಳಿಸಿದ್ದು, ಇನ್ನು ಮತ ಕಣ ರಂಗೇರುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net