ಸ್ಟ್ರಾಂಗ್ ರೂಮ್‌ನಲ್ಲಿ ಮತಯಂತ್ರ ಭದ್ರ; ಅಭ್ಯರ್ಥಿಗಳ ಭವಿಷ್ಯ 23ಕ್ಕೆ ನಿರ್ಧಾರ; ಒಟ್ಟಾರೆ ಶೇ.80.72ರಷ್ಟು ಮತದಾನ ದಾಖಲು

14 HVR 4 A
Published on

ಹಾವೇರಿ: ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರದ 241 ಮತಗಟ್ಟೆಗಳಲ್ಲಿ ಬುಧವಾರ ನಡೆದ ಮತದಾನ ಪ್ರಕ್ರಿಯೆ ನಂತರ ತಡರಾತ್ರಿ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನ ಸ್ಟ್ರಾಂಗ್ ರೂಮ್‌ಗೆ ಭದ್ರತೆಯೊಂದಿಗೆ ಮತಯಂತ್ರಗಳನ್ನು ರವಾನಿಸಲಾಯಿತು. ಒಟ್ಟಾರೆ ಶೇ.80.72ರಷ್ಟು ಮತದಾನ ದಾಖಲಾಗಿದೆ.

ಸ್ಟ್ರಾಂಗ ರೂಮ್‌ನ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ನ.23ರಂದು ಫಲಿತಾಂಶ ಪ್ರಕಟವಾಗಲಿದೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಸುಮಾರು 17 ಮತಗಟ್ಟೆಗಳಲ್ಲಿ ಸಂಜೆ 6 ಗಂಟೆಯೊಳಗಾಗಿ ಹಲವು ಮತದಾರರು ಸರತಿಯಲ್ಲಿ ನಿಂತಿದ್ದ ಕಾರಣ ಅಂಥವರಿಗೆ ಟೋಕನ್ ನೀಡಿ ಮತದಾನಕ್ಕೆ ಅವಕಾಶ ನೀಡಿದ ಪರಿಣಾಮ ರಾತ್ರಿ 7.30ರವೆರೆಗೆ ಮತದಾನ ನಡೆಯಿತು. ನಂತರ ಮತಗಟ್ಟೆಯ ಅಧಿಕಾರಿ, ಸಿಬ್ಬಂದಿ ಮತಯಂತ್ರಗಳನ್ನು ಚುನಾವಣಾಧಿಕಾರಿಗಳಿಗೆ ಹಸ್ತಾಂತರಿಸಿದರು.

ತಡರಾತ್ರಿ ಸುಮಾರು 2 ಗಂಟೆವರೆಗೆ ಮತಯಂತ್ರಗಳನ್ನು ಭಾರಿ ಭದ್ರತೆಯೊಂದಿಗೆ ಸ್ಟ್ರಾಂಗ್ ರೂಮ್‌ಗೆ ರವಾನಿಸಲಾಯಿತು. ದೆಹಲಿಯ ಚುನಾವಣಾ ಸಾಮಾನ್ಯ ವೀಕ್ಷಕ ಕಮಲ್ ರಾಮ್ ಮೀನಾ, ಶಿಗ್ಗಾಂವಿ ಡಿವೈಎಸ್‌ಪಿ ಗುರುಶಾಂತಪ್ಪ, ಶಿಗ್ಗಾಂವಿ ಹಾಗೂ ಸವಣುರ ತಹಸೀಲ್ದಾರರು, ಇತರ ಅಧಿಕಾರಿಗಳು, ವಿವಿಧ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿ ಇಟ್ಟು ಸೀಲ್ ಮಾಡಲಾಯಿತು.

ಬುಧವಾರ ಸಂಜೆವರೆಗೆ ಶೇ.80.48ರಷ್ಟು ಮತದಾನ ಆಗಿತ್ತು. ಅಂತಿಮವಾಗಿ ಶೇ.80.72ರಷ್ಟು ಮತದಾನ ದಾಖಲಾಗಿದೆ. ಕಳೆದ ಬಾರಿಗಿಂತ ಶೇ.1ರಷ್ಟು ಮತದಾನ ಹೆಚ್ಚಳವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

24/7 ಭದ್ರತೆ, ಸಿಸಿಟಿವಿ ಕಣ್ಗಾವಲು

ಸ್ಟ್ರಾಂಗ್ ರೂಮ್ ಸುತ್ತ ಸಿಎಆರ್‌ಎಫ್ ಪ್ಯಾರಾ ಮಿಲಿಟರಿ ಪಡೆ ಹಾಗೂ ಪೊಲೀಸರಿಂದ 24/7 ಕಣ್ಗಾವಲು ಹಾಕಲಾಗಿದೆ. ಎಲ್ಲೆಡೆ ಭದ್ರತೆಗೆ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲೆಡೆ ಸಿಸಿಟಿವಿ ಕ್ಯಾಮರಾದ ಮೂಲಕ ಮಾನಿಟರಿಂಗ್ ಮಾಡಲಾಗುತ್ತಿದೆ. ಸಿಸಿಟಿವಿ ಕ್ಯಾಮರಾಗಳನ್ನು ಗಮನಿಸಲು ಮೂರು ಶಿಫ್ಟ್‌ನಲ್ಲಿ ಮೂರು ತಂಡ ನಿಯೋಜಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳು ಅಥವಾ ಪಕ್ಷಗಳ ಏಜೆಂಟರು ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ ಎಂದು ಡಿಸಿ ಹೇಳಿದರು.

3 ವಿವಿಪ್ಯಾಟ್ ತಾಂತ್ರಿಕ ದೋಷ

ಕ್ಷೇತ್ರದ ಮೂರು ಮತಗಟ್ಟೆಗಳಲ್ಲಿ ಮೂರು ವಿವಿ ಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಕೂಡಲೇ ಪರ್ಯಾಯ ವಿವಿ ಪ್ಯಾಟ್ ಬಳಸುವ ಮೂಲಕ ಯಾವುದೇ ಗೊಂದಲ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಯಿತು. ಚುನಾವಣೆ ಶಾಂತಿಯುತವಾಗಿ ನಡೆಯಿತು ಎಂದು ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net