ಶಿಗ್ಗಾಂವಿ- ಸವಣೂರ ಫಲಿತಾಂಶ ಕಾರ್ಯಕರ್ತರ ಎದೆಯಲ್ಲಿ ಢವಢವ

m
Published on

ವಿಜಯವಾಣಿ ವಿಶೇಷ ಹಾವೇರಿ

ಶಿಗ್ಗಾಂವಿ- ಸವಣೂರ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ ಅಧಿಕೃತವಾಗಿ ಹೊರಬೀಳಲಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಎದೆಯಲ್ಲಿ ಢವಢವ ಶುರುವಾಗಿದ್ದು, ಬಿಜೆಪಿಯ ಭರತ ಬೊಮ್ಮಾಯಿ ಗೆಲ್ಲುತ್ತಾರೋ ಅಥವಾ ಕಾಂಗ್ರೆಸ್‌ನ ಯಾಸೀರ್‌ಖಾನ್ ಪಠಾಣ ಗೆಲ್ಲುತ್ತಾರೋ ಎಂಬ ಕುತೂಹಲ ನೂರ್ಮಡಿಯಾಗಿದೆ.

ಉಪಚುನಾವಣೆ ಬಹುತೇಕ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದ್ದು, ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎಂವುದು ಇದೀಗ ಎಲ್ಲ ಕಾತರಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ನಮ್ಮ ಪಕ್ಷವೇ ಗೆಲ್ಲಲಿದೆ ಎಂಬ ಲೆಕ್ಕಾಚಾರದಲ್ಲಿವೆ. ಖಾಸಗಿ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಭಿನ್ನ ಫಲಿತಾಂಶ ಹೊರಬಂದಿದೆ. ಅಧಿಕೃತ ಫಲಿತಾಂಶ ಶನಿವಾರ ಮಧ್ಯಾಹ್ನದ ಹೊತ್ತಿಗೆ ಹೊರಬೀಳುವ ನಿರೀಕ್ಷೆ ಇದೆ.

ಮೊಬೈಲ್ ನಿಷೇಧ:

ಮತ ಎಣಿಕೆ ಕಾರ್ಯಕ್ಕಾಗಿ ಆಗಮಿಸುವ ಏಜೆಂಟರುಗಳಿಗಾಗಿ ಗುರುತೀನ ಚೀಟಿ ವಿತರಿಸಲಾಗಿದ್ದು, ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಬರುವ ಚುನಾವಣಾ ಏಜೆಂಟರುಗಳು ಪೆನ್ ಮತ್ತು ಹಾಳೆಗಳನ್ನು ತರಲು ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನುಳಿದಂತೆ ನೀರಿನ ಬಾಟಲಿ, ಕತ್ತರಿ/ ಚಾಕು ಅಥವಾ ಇನ್ನಿತರೆ ಹರಿತವಾದ ವಸ್ತಗಳು, ಲೈಟರ್, ಬೆಂಕಿ ಪೊಟ್ಟಣ, ಗುಟ್ಕಾ, ತಂಬಾಕು, ಸೀಗರೇಟ್ ಹಾಗೂ ಸ್ಪೋಟಕ ಸಾಮಗ್ರಿಗಳು ಮತ್ತು ಪ್ರತಿಬಂಧಿಸಲ್ಪಟ್ಟ ವಸ್ತುಗಳನ್ನು ಹಾಗೂ ಮೊಬೈಲ್ ನಿಷೇದಿಸಲಾಗಿದೆ.

ಉಪಹಾರ-ಊಟದ ವ್ಯವಸ್ಥೆ:

ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲ ಅಧಿಕಾರಿ/ ಸಿಬ್ಬಂದಿಗೆ ಮತ್ತು ಎಣಿಕೆ ಏಜೆಂಟರುಗಳಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ.

ದೇವಗಿರಿಯಲ್ಲಿ ಬೆಳಗ್ಗೆ 8ರಿಂದ ಮತ ಎಣಿಕೆ

ಉಪ ಚುನಾವಣೆ ಮತ ಎಣಿಕೆ ಕಾರ್ಯ ಶನಿವಾರ ಬೆಳಗ್ಗೆ 8 ಗಂಟೆಯಿಂದ ದೇವಗಿರಿ ಸರ್ಕಾರಿ ಇಂಜಿನೀಯರಿಂಗ್ ಕಾಲೇಜ್‌ನಲ್ಲಿ ನಡೆಯಲಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಮತ ಎಣಿಕೆ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಇವಿಎಂ ಮತಗಳ ಎಣಿಕೆ ಕಾರ್ಯಕ್ಕೆ 14 ಟೇಬಲ್, ಅಂಚೆ ಮತಪತ್ರ ಎಣಿಕೆಗೆ 1 ಟೇಬಲ್ ಹಾಗೂ ಸೇವಾ ಮತದಾರರ ಅಂಚೆ ಮತಪತ್ರ ಎಣಿಕೆಗಾಗಿ 1 ಟೇಬಲ್ ಸಿದ್ದಪಡಿಸಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು ಹಾಗೂ ಒಬ್ಬರು ಎಣಿಕೆ ಮೈಕ್ರೋ ಅಬ್ಸರವರ್ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ನಿಷೇಧಾಜ್ಞೆ , ಬಿಗಿಭದ್ರತೆ

ಮತ ಎಣಿಕೆ ಕೇಂದ್ರದ ಬಳಿ ಸಾವಿರಾರು ಜನ ಜಮಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರದ 200ಮೀ ವ್ಯಾಪ್ತಿಯಲ್ಲಿ ಬಿ.ಎನ್.ಎಸ್.ಎಸ್ 163 ಕಾಯ್ದೆ ಅನ್ವಯ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಎಣಿಕೆ ಕೇಂದ್ರದ ಬಂದೋಬಸ್ತ್‌ಗೆ ಪೊಲೀಸ್ ಇಲಾಖೆಯಿಂದ ನಾಲ್ಕು ಡಿ.ಎಸ್.ಪಿ, ಒಂಭತ್ತು ಸಿ.ಪಿ.ಐ, 25 ಪಿ.ಎಸ್.ಐ, 29 ಎ.ಎಸ್.ಐ, 250 ಎಚ್.ಸಿ/ಪಿ.ಸಿ ಹಾಗೂ ಕೆ.ಎಸ್.ಆರ್.ಪಿ.ಯ ಎರಡು ತುಕಡಿಗಳು ಮತ್ತು ನಾಲ್ಕು ಡಿ.ಆರ್.ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net