

ಹಾವೇರಿ/ ಶಿಗ್ಗಾಂವಿ: ಕರೊನಾ ಸಂದರ್ಭದಲ್ಲಿ ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದು ದಾಖಲೆ ಮಾಡಿದವರು ಬಸವರಾಜ ಬೊಮ್ಮಾಯಿ. ಜನ ನರಳುವ ಸಂದರ್ಭದಲ್ಲೂ ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದ ಏಕೈಕ ಸರ್ಕಾರ ಬೊಮ್ಮಾಯಿ ಸರ್ಕಾರ. ಇಂಥವರ ಪುತ್ರ ಭರತ ಬೊಮ್ಮಾಯಿಯನ್ನು ಸೋಲಿಸಿ. ಸಾಮಾನ್ಯ ವ್ಯಕ್ತಿ ಪೈಲ್ವಾನ್ ಪಠಾಣರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಶಿಗ್ಗಾಂವಿ ತಾಲೂಕಿನ ಹುಲಗೂರ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್‌ನ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಜ್ಜನೂ ಮುಖ್ಯಮಂತ್ರಿಯಾಗಿ, ಅಪ್ಪನೂ ಮುಖ್ಯಮಂತ್ರಿ ಆಗಿದ್ದವರ ಮಗನ ವಿರುದ್ಧ ಸಾಮಾನ್ಯ ಕುಟುಂಬದ ಪೈಲ್ವಾನ್ ಪಠಾಣ ಕಣದಲ್ಲಿದ್ದಾರೆ. ಇವರನ್ನು ಗೆಲ್ಲಿಸಿ. ಚನ್ನಪಟ್ಟಣ, ಸಂಡೂರ ಗೆಲ್ಲುತ್ತೇವೆ. ಶಿಗ್ಗಾಂವಿಯನ್ನೂ ಗೆಲ್ಲಿಸಿ ನನಗೆ ಶಕ್ತಿ ತುಂಬಿ ಎಂದು ಅಬ್ಬರದ ಪ್ರಚಾರ ಮಾಡಿದರು.
ಕ್ಷೇತ್ರಕ್ಕೆ ಏನು ಕೊಟ್ರಿ ಬೊಮ್ಮಾಯಿಯವರೇ?
ಕೃಷಿ ಸಚಿವರಾಗಿ, ಗೃಹ ಸಚಿವರಾಗಿ, ಮುಖ್ಯಮಂತ್ರಿಯಾಗಿ ನಿಮ್ಮ ಕ್ಷೇತ್ರಕ್ಕೆ ಏನು ಕೊಟ್ಟಿದ್ದೀರಿ ಬೊಮ್ಮಾಯಿಯವರೇ? ನೀವು ಸಿಎಂ ಆಗಿದ್ದಾಗಲಾದರೂ ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲವಲ್ಲಾ ಏಕೆ ಸ್ವಾಮಿ ಎಂದು ಪ್ರಶ್ನಿಸಿದರು. ಬಿಜೆಪಿಯ ಹಿಂದಿನ ರಾಜ್ಯ ಸರ್ಕಾರ ಹಾಗೂ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಖಾದ್ರಿ ಹೈಲೈಟ್
ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ, ಟಿಕೆಟ್ ವಂಚಿತ ಅಜ್ಜಂಪೀರ್ ಖಾದ್ರಿ ಹೈಲೈಟ್ ಆಗಿದ್ದರು. ಸಿಎಂ ಪಕ್ಕದಲ್ಲೇ ಕುಳಿತಿದ್ದ ಖಾದ್ರಿ ಹೆಸರು ಹೇಳುತ್ತಿದ್ದಂತೆ ಜನ ಸಿಳ್ಳೆ ಹೊಡೆಯುತ್ತಿದ್ದರು. ಸಿಎಂ ಭಾಷಣದಲ್ಲಿ ಮಾತನಾಡುತ್ತ, ಅಜ್ಜಂಪೀರ್ ಖಾದ್ರಿ ನನಗೆ ತುಂಬಾ ಬೇಕಾದವರು. ಈ ಹಿಂದೆ ನಾನು ಎಂಎಲ್‌ಎ ಚುನಾವಣೆಯಲ್ಲಿ ಸೋತಾಗ ನನಗಾಗಿ ಖಾದ್ರಿ ಶಾಸಕ ಸ್ಥಾನ ತ್ಯಜಿಸಲು ಸಿದ್ದರಾಗಿದ್ದರು. ನಾನು ಸೋತು, ಖಾದ್ರಿ ಗೆದ್ದಿದ್ದಾಗ ಸ್ವತಃ ಖಾದ್ರಿಯವರೇ ಬಂದು ಅವರು ಶಾಸಕ ಸ್ಥಾನವನ್ನು ನನಗಾಗಿ ಬಿಟ್ಟು ಕೊಡಲು ಸಿದ್ದರಾಗಿದ್ದರು. ನಮ್ಮಿಬ್ಬರ ನಡುವೆ ಅಷ್ಟು ಆತ್ಮೀಯತೆ. ಹೀಗಾಗಿ ನಮ್ಮ ಮಾತಿಗೆ ಬೆಲೆ ನೀಡಿ ನಾಮಪತ್ರ ವಾಪಸ್ ಪಡೆದು ಪಠಾಣ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ಕೊಂಡಾಡಿದರು. ಖಾದ್ರಿ ಕೂಡ ಪಠಾಣ ಪರ ಬ್ಯಾಟ್ ಬೀಸಿದರು.