ಮಗನಿಗೆ ಓಟು ಕೇಳಲು ಬೊಮ್ಮಾಯಿಗೆ ನೈತಿಕತೆ ಇಲ್ಲ; ಸಿಎಂ ಸಿದ್ದರಾಮಯ್ಯ

5 HVR 5 D
Published on

ಹಾವೇರಿ/ ಶಿಗ್ಗಾಂವಿ: ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ, ಈ ಬಾರಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅಷ್ಟೇ ಸತ್ಯ. ಇಲ್ಲಿ ಕಾಂಗ್ರೆಸ್ ಗೆದ್ದರೆ ನನಗೆ, ನನ್ನ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಿಗ್ಗಾಂವಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್‌ನ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಇಡೀ ರಾಜ್ಯದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದೆ. ಎಲ್ಲ ಜಾತಿ, ಧರ್ಮದ ಬಡವರ ಖಾತೆಗಳಿಗೆ ನೇರವಾಗಿ 56 ಸಾವಿರ ಕೋಟಿ ರೂಪಾಯಿ ಹಾಕಿದೆ. ನಾವು ಹಿಂದೆ, ಈಗಲೂ ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಹಾಗಾಗಿ, ಜನ ನಮ್ಮ ಕೈ ಬಿಡಲ್ಲ ಎಂದರು.

ನುಡಿದಂತೆ ನಡೆದ ನೈತಿಕತೆ ಆಧಾರದಲ್ಲಿ ಮತ್ತೆ ಜನರ ಬಳಿಗೆ ಬಂದು ಮತ ಕೇಳುತ್ತಿದ್ದೇವೆ. ಮಾತೆತ್ತಿದರೆ ದಮ್ಮು, ತಾಕತ್ತು ಎನ್ನುವ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ರಾಜ್ಯಕ್ಕಾಗಲಿ, ಕ್ಷೇತ್ರಕ್ಕಾಗಲಿ ಏನು ಕೊಟ್ಟಿದ್ದಾರೆ ಹೇಳಿ. ಅವರ ಮಗನಿಗೆ ಓಟು ಕೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಅಧಿಕಾರ ಇದ್ದಾಗ ಕೇವಲ ಭ್ರಷ್ಟಾಚಾರದಿಂದ ಹಣ ಲೂಟಿ ಮಾಡಿ ಮನೆಗೆ ಹೋದರು. ಈಗ ಜಾತಿ-ಧರ್ಮದ ಹೆಸರಿನಲ್ಲಿ ಬಡವರನ್ನು ಪರಸ್ಪರ ಎತ್ತಿ ಕಟ್ಟಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಸಿಎಂ ಸಮ್ಮುಖದಲ್ಲಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಲಂಬಾಣಿ ಮಹಿಳೆಯರು ಸಿಎಂಗೆ ಲಂಬಾಣಿ ಡುಪು ನೀಡಿ ಸನ್ಮಾನಿಸಿದರು.

ಸಭೆಯಲ್ಲಿ ಸಚಿವರಾದ ಶಿವಾನಂದ ಪಾಟೀಲ, ಕೆ.ಜೆ.ಜಾರ್ಜ್, ರಹೀಂ ಖಾನ್, ನಾಸೀರ್ ಅಹ್ಮದ್ ಖಾನ್, ಶಾಸಕರಾದ ಸಲೀಂ ಅಹ್ಮದ್, ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣವರ, ಪ್ರಸಾದ ಅಬ್ಬಯ್ಯ, ನಾರಾಯಣಸ್ವಾಮಿ, ಬಲಕೀಶ್ ಬಾನು, ಮಾಜಿ ಸಚಿವ ಎಚ್.ಆಂಜನೇಯ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಅಭ್ಯರ್ಥಿ ಯಾಸೀರ್ ಖಾನ್ ಪಠಾಣ, ರಾಜು ಕುನ್ನೂರ, ಇತರರಿದ್ದರು.

ಬೊಮ್ಮಾಯಿಗೆ ಪುತ್ರ ವ್ಯಾಮೋಹ

ಅಭ್ಯರ್ಥಿ ಮರಣ ಹೊಂದಿದರೆ ಉಪಚುನಾವಣೆ ಬರುತ್ತದೆ. ಆದರೆ, ಶಿಗ್ಗಾಂವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ತಮ್ಮ ಪುತ್ರ ವ್ಯಾಮೋಹದ ಸಲುವಾಗಿ ಈ ಚುನಾವಣೆ ಬಂದಿದೆ. ದುಡಿದ ಕಾರ್ಯಕರ್ತರ ಎದೆಯ ಕಾಲಿನ ಮೇಲೆ ಕಾಲು ಇಟ್ಟು ಮಗನನ್ನು ಅಧಿಕಾರಕ್ಕೆ ತರಲು ಹೊರಟಿದ್ದಾರೆ. ಇದನ್ನು ಜನ ಅರಿತುಕೊಳ್ಳಬೇಕು. ಒಂದು ದಿನ ಶಿಗ್ಗಾಂವಿಯಲ್ಲಿ ವಸತಿ ಮಾಡಿಲ್ಲ. ಒಂದು ದಿನ ಕಚೇರಿಯಲ್ಲಿ ಕುಳಿತು ಜನರ ಸಮಸ್ಯೆ ಆಲಿಸಲಿಲ್ಲ. ನಮ್ಮ ಶಾಸಕರು, ಸಚಿವರು ಜನಸ್ಪಂದನ ಮೂಲಕ ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಕಾಂಗ್ರೆಸ್ ಗೆಲ್ಲಿಸಿ ಎಂದು ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ ಮನವಿ ಮಾಡಿದರು.

ಕೋಟ್:

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರೂ ಕ್ಷೇತ್ರಕ್ಕೆ ಕುಡಿಯುವ ನೀರು ಕೊಡಲು ಯೋಗ್ಯತೆ ಇಲ್ಲ. ಬಂಕಾಪುರದಲ್ಲಿ 20 ದಿನಕ್ಕೊಮ್ಮೆ ನೀರು ಬರುತ್ತಿದೆ. ಪಠಾಣ ಶಾಸಕರಾದರೆ ವಾರಕ್ಕೆ ಎರಡು ಸಲ ನೀರು ಕೊಡುತ್ತೇವೆ.

- ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net