ಶಿಗ್ಗಾಂವಿ ಟಿಕೆಟ್ ಪಡೆಯಲು ಜಾತಿ, ಧರ್ಮದ ಅಸ್ತ್ರ; ಕ್ಷೇತ್ರ ಕೈವಶಕ್ಕೆ ಕಾಂಗ್ರೆಸ್ ರಣತಂತ್ರ; ಬಿಜೆಪಿ ಭದ್ರಕೋಟೆ ಉಳಿಸಿಕೊಳ್ಳಲು ಬಿಜೆಪಿ ಪ್ರತಿತಂತ್ರ

Shiggavi Halchal
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ಚನ್ನಪಟ್ಟಣದಂತೆ ಶಿಗ್ಗಾಂವಿಯನ್ನೂ ಪ್ರತಿಷ್ಠೆಯ ಕಣವನ್ನಾಗಿ ಸ್ವೀಕರಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡ್ ಶತಾಯಗತಾಯ ಕ್ಷೇತ್ರ ವಶಪಡಿಸಿಕೊಳ್ಳಲು ರಣತಂತ್ರ ಹೆಣೆಯುತ್ತಿವೆ. ಆಕಾಂಕ್ಷಿಗಳು ಮಾತ್ರ ಜಾತಿ, ಧರ್ಮದ ಅಸ್ತ್ರವನ್ನು ಇಟ್ಟುಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಬಸವರಾಜ ಬೊಮ್ಮಾಯಿ ಹಿಡಿತದಲ್ಲಿದ್ದ ಶಿಗ್ಗಾಂವಿ ಕ್ಷೇತ್ರವನ್ನು ಈ ಬಾರಿ ಹೇಗಾದರೂ ಮಾಡಿ ಕೈವಶ ಮಾಡಿಕೊಳ್ಳಲು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ರಣತಂತ್ರ ಹೆಣೆಯುತ್ತಿದೆ. ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿರುವ ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಪ್ರತಿತಂತ್ರ ರೂಪಿಸುತ್ತಿದೆ.
ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳ (ಎಸ್.ನಿಜಲಿಂಗಪ್ಪ ಹಾಗೂ ಬಸವರಾಜ ಬೊಮ್ಮಾಯಿ) ಕೊಡುಗೆ ಕೊಟ್ಟಿರುವ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರ ಈ ಹಿಂದೆ ಕಾಂಗ್ರೆಸ್‌ನ ಹಿಡಿತದಲ್ಲಿತ್ತು. ಆದರೆ, ಬಸವರಾಜ ಬೊಮ್ಮಾಯಿ ಎಂಟ್ರಿ ಕೊಟ್ಟ ಬಳಿಕ 2008ರಿಂದ ನಾಲ್ಕು ಬಾರಿ ದಿಗ್ವಿಜಯ ಸಾಧಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬೊಮ್ಮಾಯಿ ಹಾವೇರಿ ಸಂಸದರಾಗಿ ರಾಷ್ಟ್ರ ರಾಜಕಾರಣಕ್ಕೆ ಮರಳಿದ ಪರಿಣಾಮ ಶಿಗ್ಗಾಂವಿ ಉಪಚುನಾವಣೆ ಎದುರಿಸುವಂತಾಗಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಪುತ್ರ ಭರತ ಬೊಮ್ಮಾಯಿಗೆ ಟಿಕೆಟ್ ಕೊಡಿಸಲು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಆದರೂ ಭರತ ಹೆಸರು ಮುಂಚೂಣಿಯಲ್ಲಿರುವುದು ಗಮನಾರ್ಹ. ಕುಟುಂಬ ರಾಜಕಾರಣ ಬೇಡ, ಈ ಬಾರಿ ಸ್ಥಳೀಯರಿಗೆ ಟಿಕೆಟ್ ಕೊಡಿ ಎಂದು ಕೆಲ ಸ್ಥಳೀಯ ನಾಯಕರು ಆಗ್ರಹಿಸಿದ್ದಾರೆ. ಇನ್ನು ಕೆಲವರು ಬಸವರಾಜ ಬೊಮ್ಮಾಯಿ ಅವರಿಗೇ ಕ್ಷೇತ್ರದ ಜವಾಬ್ದಾರಿ ಕೊಡಿ ಎಂದು ಒತ್ತಾಯಿಸಿದ್ದಾರೆ. ಉಳಿದಂತೆ ಕೆಆರ್‌ಎಸ್ ಪಕ್ಷದಿಂದ ಸ್ಪರ್ಧಿಸಲು ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮುಂದಾಗಿದ್ದಾರೆ.
ಜಾತಿ, ಧರ್ಮ ಲೆಕ್ಕಾಚಾರ
ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಹಾಗೂ ಪಂಚಮಸಾಲಿ ಮತಗಳೇ ನಿರ್ಣಾಯಕ. ಹಾಗಾಗಿ, ಕಾಂಗ್ರೆಸ್ ಟಿಕೆಟ್ ಅನ್ನು ಈ ಬಾರಿಯೂ ಮುಸ್ಲಿಮರಿಗೇ ಕೊಡಬೇಕು ಎಂಬ ಕೂಗು ಕೈಪಾಳಯದಲ್ಲಿದೆ. ಬಿಜೆಪಿ ಟಿಕೆಟ್ ಅನ್ನು ಈ ಬಾರಿ ಪಂಚಮಸಾಲಿ ಸಮುದಾಯಕ್ಕೆ ಕೊಡಬೇಕೆಂಬುದು ಬಿಜೆಪಿಗರಲ್ಲಿ ಒತ್ತಡ ಹೆಚ್ಚಿದೆ.
ಮುರುಗೇಶ ನಿರಾಣಿ ಹೆಸರು ಮುನ್ನಲೆಗೆ
ಪಂಚಮಸಾಲಿ ಸಮುದಾಯದವರಿಗೆ ಟಿಕೆಟ್ ಕೊಡಬೇಕೆಂಬ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹೆಸರು ಮುನ್ನೆಲೆಗೆ ಬಂದಿದೆ. ಟಿಕೆಟ್‌ಗಾಗಿ ಬಿಜೆಪಿಯಲ್ಲಿ 57 ಆಕಾಂಕ್ಷಿತರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಭರತ ಬೊಮ್ಮಾಯಿ, ಮುರುಗೇಶ ನಿರಾಣಿ, ಶ್ರೀಕಾಂತ ದುಂಡಿಗೌಡ್ರ, ಶಶಿಧರ ಎಲಿಗಾರ, ಶಿವಾನಂದ ಮ್ಯಾಗೇರಿ, ಡಾ.ಶೋಭಾ ನಿಸ್ಸೀಮಗೌಡ್ರ, ಗಂಗಾಧರ ಬಾಣದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ
ಕ್ಷೇತ್ರದಲ್ಲಿ ಅಹಿಂದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಈ ಬಾರಿ ಕ್ಷೇತ್ರವನ್ನು ವಶಪಡಿಸಿಕೊಳ್ಳಲೇಬೇಕೆಂದು ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಶಿಗ್ಗಾಂವಿ ಕ್ಷೇತ್ರ ಬರುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ 8,598 ಮತಗಳ ಮುನ್ನಡೆ ಸಾಧಿಸಿದೆ. ಇದೇ ಕಾರಣಕ್ಕೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಹೆಚ್ಚಾಗಿದೆ. ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ರಾಜು ಮಂಜುನಾಥ ಕುನ್ನೂರ, ಯಾಸೀರ್‌ಖಾನ್ ಪಠಾಣ, ರಾಜೇಶ್ವರಿ ಪಾಟೀಲ, ಸೇರಿದಂತೆ 13 ಮುಖಂಡರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

2018ರ ಚುನಾವಣೆ ಫಲಿತಾಂಶ
ಹೆಸರು ಪಕ್ಷ ಮತಗಳು
ಬಸವರಾಜ ಬೊಮ್ಮಾಯಿ ಬಿಜೆಪಿ 83,868
ಅಜೀಮ್‌ಪೀರ್ ಖಾದ್ರಿ ಕಾಂಗ್ರೆಸ್ 74,603
ಸೋಮಣ್ಣ ಬೇವಿನಮರದ ಪಕ್ಷೇತರ 7,203 2023ರ ವಿಧಾನಸಭೆ ಚುನಾವಣೆ
ಹೆಸರು ಪಕ್ಷ ಮತಗಳು
ಬಸವರಾಜ ಬೊಮ್ಮಾಯಿ ಬಿಜೆಪಿ 1,000,16
ಯಾಸೀರ್‌ಖಾನ್ ಪಠಾಣ ಕಾಂಗ್ರೆಸ್ 64,038
ಶಶಿಧರ ಯಲಿಗಾರ ಜೆಡಿಎಸ್ 13,928

ಲಿಂಗಾಯತ, ಮುಸ್ಲಿಂ ಮತಗಳ ಮೇಲೆ ಕಣ್ಣು
ಶಿಗ್ಗಾಂವಿ ಕ್ಷೇತ್ರದಲ್ಲಿ 1,21,067 ಪುರುಷ, 1,15,717 ಮಹಿಳಾ ಹಾಗೂ 6 ತೃತೀಯ ಲಿಂಗಿಗಳು ಸೇರಿ ಒಟ್ಟು 2,36,790 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಪಂಚಮಸಾಲಿ ಮತ್ತು ಲಿಂಗಾಯತ ಮತಗಳು 80 ಸಾವಿರಕ್ಕೂ ಅಧಿಕ ಇವೆ. ಎರಡೂ ಪಕ್ಷದಲ್ಲಿ ಲಿಂಗಾಯತರೇ ಅಭ್ಯರ್ಥಿ ಆದಲ್ಲಿ ಈ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ. 60 ಸಾವಿರಕ್ಕೂ ಹೆಚ್ಚು ಮತಗಳನ್ನು ಹೊಂದಿರುವ ಅಲ್ಪಸಂಖ್ಯಾತ ಮುಸ್ಲಿಮರ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಕ್ಷೇತ್ರದಲ್ಲಿ 30 ಸಾವಿರ ಕುರುಬರು, 22 ಸಾವಿರ ಎಸ್‌ಸಿ, 18 ಸಾವಿರ ಎಸ್‌ಟಿ, 30 ಸಾವಿರ ಇತರ ಸಮಾಜದ ಮತಗಳಿವೆ ಎಂದು ಅಂದಾಜಿಸಲಾಗಿದೆ.

ಪಕ್ಷಗಳ ನಡುವಿನ ಜಂಗೀಕುಸ್ತಿ

  • ಕಾಂಗ್ರೆಸ್- ಬಿಜೆಪಿ ನಡುವೆ ನೇರ ಫೈಟ್ ಫಿಕ್ಸ್
  • ಬಸವರಾಜ ಬೊಮ್ಮಾಯಿ ನಡೆ ಮೇಲೆ ಬಿಜೆಪಿ ಟಿಕೆಟ್ ನಿರ್ಧಾರ
  • ಯಾರಿಗೇ ಟಿಕೆಟ್ ಕೊಟ್ಟರೂ ಬೊಮ್ಮಾಯಿಗೆ ಜವಾಬ್ದಾರಿ ಸಾಧ್ಯತೆ
  • ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಅಪಸ್ವರ
  • ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಚರ್ಚೆ ಜೋರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net