

ಹಾವೇರಿ: ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಲ ಕಾರ್ಯಕರ್ತರು ಸಿಎಂ, ಡಿಸಿಎಂ ಹೆಸರು ಹೇಳಿಕೊಂಡು, ಎಲ್ಲಿಂದಲೋ ಬಂದು ಶಿಗ್ಗಾಂವಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ನಮಗೇ ಟಿಕೆಟ್ ಕೊಡುವುದಾಗಿ ಹೈಕಮಾಂಡ್ ಹೇಳಿದೆ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ. ಅಂಥವರ ಬಗ್ಗೆ ವರದಿ ಕೊಡುವಂತೆ ತಾಲೂಕು ಘಟಕಕ್ಕೆ ಸೂಚಿಸಿದ್ದೇನೆ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೂ ಕಳೆದ ಬಾರಿಯಂತೆ ಈ ಬಾರಿಯೂ ಆಕಾಂಕ್ಷಿಯಾಗಿದ್ದೇನೆ. ಹಾಗಂಥ ನನಗೇ ಟಿಕೆಟ್ ಎಂದರೆ ಸರಿಯಲ್ಲ. ಟಿಕೆಟ್ ಕೇಳಿ, ಪಕ್ಷದ ಚೌಕಟ್ಟಿನಲ್ಲಿ ಸಂಘಟನೆ ಮಾಡಿ. ನನಗೇ ಟಿಕೆಟ್ ಎಂದು ಹೇಳಿಕೊಳ್ಳುವುದು ಬೇಡ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ನೀರಲಗಿ ಎಚ್ಚರಿಕೆ ನೀಡಿದರು. ಈ ಬಾರಿ ಟಿಕೆಟ್ ಲಿಂಗಾಯತರಿಗೆ ಅಥವಾ ಮುಸ್ಲಿಮರಿಗೆ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಶಿಗ್ಗಾಂವಿ ಕ್ಷೇತ್ರದ ಮತದಾರರು ಬಿಜೆಪಿಗಿಂತ ಹೆಚ್ಚು ಮತಗಳನ್ನು ಕಾಂಗ್ರೆಸ್‌ಗೆ ಕೊಟ್ಟಿದ್ದಾರೆ ಎಂದರು.
ದೊಡ್ಡಹುಣಸೆ ಮಠದ ಶ್ರೀ ರೇಸ್‌ನಲ್ಲಿ
ಶಿಗ್ಗಾಂವಿ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರೇ ಆಗಲಿ ಪಕ್ಷ ಗೆಲ್ಲಲಿದೆ. ದೊಡ್ಡಹುಣಸೆ ಮಠದ ಸ್ವಾಮೀಜಿಯೂ ಟಿಕೆಟ್‌ಗಾಗಿ ಅರ್ಜಿ ಕೊಟ್ಟಿದ್ದಾರೆ. ಅವರೊಟ್ಟಿಗೆ ಮುಕ್ತವಾಗಿ ಮಾತನಾಡಿದ್ದೇನೆ. ಸಕ್ರಿಯ ಸದಸ್ಯತ್ವ ತೆಗೆದುಕೊಳ್ಳಬೇಕು. ರಾಜ್ಯ ಕಮಿಟಿಗೆ ಕಳುಹಿಸುತ್ತೇವೆ. ನಂತರ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಜಿಲ್ಲಾ ಘಟಕ ಪುನರ್ ರಚನೆ
ಕಾರ್ಯಕರ್ತರು ದೃತಿಗೆಡದೆ ಮುಂಬರುವ ತಾಪಂ, ಜಿಪಂ, ಶಿಗ್ಗಾಂವಿ ಉಪಚುನಾವಣೆಗೆ ನಾವೆಲ್ಲ ಸಿದ್ಧರಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕವನ್ನು ಪುನರ್ ರಚಿಸಲಾಗುವುದು. ನಿಷ್ಕ್ರಿಯರಾದವರನ್ನು ಬದಲಾಯಿಸಿ ಹೊಸ ರೂಪ ಕೊಡಲಾಗುವುದು ಎಂದು ನೀರಲಗಿ ಹೇಳಿದರು.