

ಹಾವೇರಿ: ಬಸವರಾಜ ಬೊಮ್ಮಾಯಿ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತಂತ್ರಗಾರಿಕೆ ಹೆಣೆಯಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಗುರುವಾರ ಉಪ ಚುನಾವಣೆಯ ಉಪ ಸಮಿತಿಯ ಅಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಗೌಪ್ಯ ಸಭೆ ಜರುಗಿತು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಜುಲೈ 5ರಂದು ಶಿಗ್ಗಾಂವಿಯಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗುವುದು. ಅಂದು ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳ ಜತೆಗೆ ಚರ್ಚಿಸಲಾಗುವುದು. ಆಕಾಂಕ್ಷಿಗಳೆಲ್ಲರೂ ಅರ್ಜಿ ಸಲ್ಲಿಸಲಿ. ಆದರೆ, ಪಕ್ಷ ನಿರ್ಧರಿಸುವ ಅಭ್ಯರ್ಥಿಗೆ ಎಲ್ಲರೂ ಬೆಂಬಲಿಸಬೇಕು. ಆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಖಂಡ್ರೆ ಸಂದೇಶ ರವಾನಿಸಿದರು. ಚುನಾವಣೆ ಹಿನ್ನೆಲೆ ಕೆಲ ತಂತ್ರಗಾರಿಕೆ ಕುರಿತು ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಸ್ಥಳೀಯ ಶಾಸಕರಾದ ರುದ್ರಪ್ಪ ಲಮಾಣಿ, ಯು.ಬಿ.ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಪ್ರಸಾದ ಅಬ್ಬಯ್ಯ, ಹಾವೇರಿ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಮತ್ತಿತರರು ಪಾಲ್ಗೊಂಡಿದ್ದರು.