ಶಿಗ್ಗಾಂವಿ ‌ಉಪಚುನಾವಣೆ; ಬಿಜೆಪಿ‌ ಟಿಕೆಟ್ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಭಾರಿ‌ ಟಾಸ್ಕ್; ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನದಾಸ ಅಗರವಾಲ ಖಡಕ್ ಸೂಚನೆ

Shiggavi BJP Meet
Published on

ಹಾವೇರಿ/ ಶಿಗ್ಗಾಂವಿ: ಶಿಗ್ಗಾಂವಿ ‌ಉಪಚುನಾವಣೆ ಬಿಜೆಪಿ‌ ಟಿಕೆಟ್ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಭಾರಿ‌ ಟಾಸ್ಕ್ ನೀಡಿದೆ.

ಶಿಗ್ಗಾಂವಿ ಪಟ್ಟಣದಲ್ಲಿ ಆಯೋಜಿಸಿದ್ದ ಉಪಚುನಾವಣೆಯ ಸಂಘಟನಾತ್ಮಕ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನದಾಸ ಅಗರವಾಲ ಖಡಕ್ ಸೂಚನೆ ನೀಡಿದ್ದಾರೆ.

ಉಪಚುನಾವಣೆಯ ಟಿಕೆಟ್ ಗಾಗಿ 57 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಸಂಸದ,‌ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಪುತ್ರ ಭರತ ಬೊಮ್ಮಾಯಿ‌ ಅವರ ಹೆಸರೂ ಪಟ್ಟಿಯಲ್ಲಿದೆ.

ಆಕಾಂಕ್ಷಿಗಳು ಶಿಗ್ಗಾಂವಿ- ಸವಣೂರ ಕ್ಷೇತ್ರದ ಎಲ್ಲ ಬೂತ್ ಗಳಿಗೂ ಪ್ರವಾಸ ಮಾಡಬೇಕು. ಒಂದು ಬೂತ್ ನಲ್ಲಿ ಕನಿಷ್ಠ 200 ಜನರನ್ನು ಬಿಜೆಪಿ ಸದಸ್ಯರನ್ನಾಗಿ ಮಾಡಬೇಕು. ಯಾರು ಹೆಚ್ಚು ಸದಸ್ಯರನ್ನು ಮಾಡಿಸುತ್ತಾರೋ ಅವರ ಹೆಸರು ಮುಂಚೂಣಿಯಲ್ಲಿ ಇರಲಿದೆ ಎಂದು ಟಾಸ್ಕ್ ಕೊಟ್ಟಿದ್ದಾರೆ.

ಪಕ್ಷ, ಪಕ್ಷದ ವರಿಷ್ಠರು ಅಂತಿಮವಾಗಿ ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರುವಂತೆ ಪ್ರಮಾಣವನ್ನು ಪಡೆಯಲಾಗಿದ್ದು, ಪಕ್ಷದ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದ ಪ್ರತಿಯೊಂದು ಬೂತ್ ಗೆ ತೆರಳಿ ಪ್ರತಿ ಬೂತ್ ನಿಂದ ಕನಿಷ್ಠ ಎರಡು ನೂರಕ್ಕೂ ಹೆಚ್ಚು ಜನರನ್ನು ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ನೋಂದಣಿ ಮಾಡಿಸುವುದರ ಜೊತೆಗೆ ಬಿಜೆಪಿಯ ಸಾಧನೆ ಕ್ಷೇತ್ರದ ಅಭಿವೃದ್ಧಿಯನ್ನು ತಿಳಿಸುವ ಮೂಲಕ ಉಪಚುನಾವಣೆಗೆ ಸಜ್ಜಾಗಬೇಕು. ಶಿಗ್ಗಾವಿ ಕ್ಷೇತ್ರದಿಂದ ಕನಿಷ್ಠ ಒಂದು ಲಕ್ಷಕ್ಕೂ ಹೆಚ್ಚು ಸದಸ್ಯತ್ವವನ್ನು ಹೊಂದುವ ಗುರಿಯನ್ನು ಪಕ್ಷ ನಿಗದಿಗೊಳಿಸಲಾಗಿದ್ದು ಸ್ಪರ್ಧೆ ಬಯಸುವ ಪ್ರತಿಯೊಬ್ಬ ಆಕಾಂಕ್ಷಿಗಳು ಪಕ್ಷದ ಸದಸ್ಯತ್ವದ ಜೊತೆಗೆ ಜನಮನ ಗೆಲ್ಲುವಲ್ಲಿ ಮುಂದಾಗಬೇಕು ಅತಿ ಹೆಚ್ಚು ಸಂಘಟನೆಗೆ ಒಳಗಾಗುವವರನ್ನು ಪಕ್ಷ ಪರಿಗಣಿಸಲಾಗುತ್ತದೆ ಎಂದರು.

ಸಭೆಯಲ್ಲಿ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಪಿ.ರಾಜೀವ, ಮಹೇಶ ಟೆಂಗಿನಕಾಯಿ, ಬಿ.ಸಿ.ಪಾಟೀಲ,
ಶಂಕರ ಪಾಟೀಲ ಮುನೇನಕೊಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ವಿಶ್ವನಾಥ ಹರವಿ, ಹನಮಂತಗೌಡ ಮುದಿಗೌಡ್ರ, ಸೋಮಶೇಖರ ಗೌರೀಮಠ, ಇತರರಿದ್ದರು.

ಮಾಜಿ ಸಚಿವರು, ಶಾಸಕರಿಗೆ ಜಿಪಂ ಹೊಣೆ

ಪಕ್ಷದ‌ ಮಾಜಿ ಸಚಿವರು ಹಾಗೂ ಕೆಲ ಹಾಲಿ ಶಾಸಕರಿಗೆ ಕ್ಷೇತ್ರದ ಆರು ಜಿಪಂ ಕ್ಷೇತ್ರಗಳ ಹೊಣೆಗಾರಿಕೆ ನೀಡಲಾಗಿದೆ. ಇತರ ಶಕ್ತಿ ಕೇಂದ್ರಗಳ ಜವಾಬ್ದಾರಿಯನ್ನು ಪ್ರಮುಖರಿಗೆ ನೀಡಲಾಗಿದೆ. ಆ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ಅವರೇ ವಹಿಸಬೇಕು ಎಂದು ಅಗರವಾಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net