ನನಗಿಂತ ಹೆಚ್ಚು ಮತ ಕೊಟ್ಟು ಭರತನನ್ನು ಗೆಲ್ಲಿಸಿ, * ಹತ್ತು ದಿನ ಹಗಲು- ರಾತ್ರಿ ಶ್ರಮಿಸಿ; ಶಿಗ್ಗಾಂವಿ- ಸವಣೂರ ಕ್ಷೇತ್ರದ ಜನತೆಗೆ ಬಸವರಾಜ ಬೊಮ್ಮಾಯಿ ಮನವಿ

25 HVR 3 A
Published on

ಹಾವೇರಿ (ಶಿಗ್ಗಾಂವಿ): ಕಾಂಗ್ರೆಸ್‌ನ ದುರಾಡಳಿತದಿಂದ ನಮ್ಮ ಜನರನ್ನು ರಕ್ಷಣೆ ಮಾಡಲು ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಭರತ ಬೊಮ್ಮಾಯಿ ಅವರನ್ನು ಗೆಲ್ಲಿಸಬೇಕು. ನನಗಿಂತ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಿ. ಹತ್ತು ದಿನ ಹಗಲು- ರಾತ್ರಿ ಭರತ ಗೆಲುವಿಗಾಗಿ ಎಲ್ಲೂ ಒಂದಾಗಿ ಶ್ರಮಿಸಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು.

ಶಿಗ್ಗಾಂವಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ನಾಮಪತ್ರ ಸಲ್ಲಿಕೆಗೂ ಮುನ್ನ ಶಿಗ್ಗಾಂವಿ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ರೋಡ್ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭರತ ಬೊಮ್ಮಾಯಿಗೆ ಇಷ್ಟು ದೊಡ್ಡ ಶಕ್ತಿ ನೀಡಿದ್ದೀರಿ. ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ನಮ್ಮೆಲ್ಲರ ನೆಚ್ಚಿನ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ನನ್ನ ಚುನಾವಣೆಗೆ ನಾಲ್ಕು ಬಾರಿ ಶಿಗ್ಗಾಂವಿಗೆ ಬಂದಿದ್ದಾರೆ. ಅವರು ಶಿಗ್ಗಾಂವಿಗೆ ಕಾಲಿಟ್ಟಾಗಲೆಲ್ಲ ಬಿಜೆಪಿ ಗೆದ್ದಿದೆ. ನನಗಿಂತ ಹೆಚ್ಚಿನ ಅಂತರದಿಂದ ಭರತ ಬೊಮ್ಮಾಯಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಐಟಿಐ, ಮೆಡಿಕಲ್ ಕಾಲೇಜು, ಆಸ್ಪತ್ರೆ ಸೇರಿ ಅನೇಕ ಕಾರ್ಯಗಳಾಗಿವೆ. ಕ್ಷೇತ್ರದಲ್ಲಿ ಗಾರ್ಮೆಂಟ್ ಕಾರ್ಖಾನೆಯಿಂದ ಸುಮಾರು ಐದು ಸಾವಿರ ಹೆಣ್ಣು ಮಕ್ಕಳು ಉದ್ಯೋಗ ಪಡೆದಿದ್ದಾರೆ ಎಂದರು.

ರೋಡ್ ಶೋನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಸಿ.ಸಿ.ಪಾಟೀಲ, ಮುರುಗೇಶ ನಿರಾಣಿ, ಬೈರತಿ ಬಸವರಾಜ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಯಾರೂ ಮೈಮರೆಯದಿರಿ :

ಭರತ ಬೊಮ್ಮಾಯಿ ನಮ್ಮ ಕಾಲದ ಅಭಿವೃದ್ಧಿ ಮುಂದುವರೆಯಬೇಕು. ರೈತರು, ಹಿಂದುಳಿದವರು, ಮಹಿಳೆಯರು, ಯುವಕರ ಸಮಗ್ರ ಅಭಿವೃದ್ಧಿ ಮಾಡಬೇಕೆಂದು ಭರತಗೆ ಆದೇಶಿಸುತ್ತೇನೆ. ನಾನು ನಿಮ್ಮ ಜತೆಗೆ ಇರುತ್ತೇನೆ. ಚುನಾವಣೆಯಲ್ಲಿ ಯಾರೂ ಮೈಮರೆಯಬಾರದು, ಹತ್ತು ದಿನ ಎಲ್ಲರೂ ಬೂತ್ ಮಟ್ಟದಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು.

ಕೋಟ್:

ಇಷ್ಟು ದೊಡ್ಡ ಸಂಖ್ಯೆಯಲ್ಲಿ ನನ್ನ ಬೆಂಬಲಕ್ಕೆ ಬಂದಿದ್ದೀರಿ. ನಿಮ್ಮ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲ್ಲ. ಶಿಗ್ಗಾಂವಿ ಕ್ಷೇತ್ರದಲ್ಲಿ ನಮ್ಮ ತಂದೆಯವರು ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ. ನಿಮ್ಮ ಮಾರ್ಗದರ್ಶನದಲ್ಲಿ ದೀನ ದಲಿತರು, ರೈತರು, ಮಹಿಳೆಯರು, ಯುವಕರ ಪರವಾಗಿ ಕೆಲಸ ಮಾಡುತ್ತೇನೆ. ನಿಮ್ಮ ತಮ್ಮನಾಗಿ ನಿಮ್ಮೆಲ್ಲರ ರಕ್ಷಣೆ ಮಾಡುತ್ತೇನೆ.

- ಭರತ ಬೊಮ್ಮಾಯಿ, ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net