

ಹಾವೇರಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸಂಗಮೇಶ್ವರ ಕಂಬಾಳಿಮಠ ಅವರಂಥ ಪಕ್ಷ ವಿರೋಧಿಗಳು ಕಾರಣ. ಪಕ್ಷದಲ್ಲೇ ಇದ್ದು ಬೆನ್ನಿಗೆ ಚೂರಿ ಹಾಕಿದ ಇಂಥವರಿಂದಲೇ ಸೋತಿದ್ದೇ ವಿನಃ ಮತ್ತೇನು ಕಾರಣವಿಲ್ಲ ಎಂದು ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಾಧರ ಸಾತಣ್ಣವರ ತಿರುಗೇಟು ನೀಡಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಾಳಿಮಠ 2023 ಮೇನಲ್ಲಿ ಬಿಜೆಪಿ ಸೇರಿದರು. ಕೆಸಿಸಿ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಇದ್ದರೂ ಕಂಬಾಳಿಮಠ ಬಸವರಾಜ ಬೊಮ್ಮಾಯಿ ಹಾಗೂ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿ ಗೆಲುವು ಸಾಧಿಸಿದರು. ಆಗಲೇ ಅವರನ್ನು ಉಚ್ಛಾಟನೆ ಮಾಡಿ ಎಂದು ಬೊಮ್ಮಾಯಿ ಅವರಿಗೆ ಹೇಳಿದ್ದೆವು. ಇಂದಲ್ಲ ನಾಳೆ ಸುಧಾರಿಸುತ್ತಾರೆ ಎಂದಿದ್ದರು ಎಂದು ಹೇಳಿದರು.
ಬೊಮ್ಮಾಯಿ ಅವರಿಗೆ ಪುತ್ರ ವ್ಯಾಮೋಹ ಏನಿಲ್ಲ. ಅವರು ಚುನಾವಣೆ ಬೇಡ ಎಂದಿದ್ದರು. ನಿಮ್ಮ ಮಗನೇ ನಿಲ್ಲಬೇಕು ಎಂದು ನಾವು ಒತ್ತಡ ಹೇರಿದ್ದೆವು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರಿಂದ ಕರೆ ಬಂದ ನಂತರ ವರಿಷ್ಠರ ಒತ್ತಡಕ್ಕೆ ಮಣಿದು ಟಿಕೆಟ್ ಪಡೆದಿದ್ದಾರೆ. ಶಿಗ್ಗಾಂವಿ ಉಪಚುನಾವಣೆ ಫಲಿತಾಂಶ ಬಂದ ದಿನವೇ ಯಾಸೀರ್‌ಖಾನ್ ಪಠಾಣ ಪರವಾಗಿ ಹಾಗೂ ಅಜೀಮ್‌ಪೀರ್ ಖಾದ್ರಿ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಂಬಾಳಿಮಠ ಶುಭಕೋರಿ ಪೋಸ್ಟ್ ಮಾಡಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲದೇ ಮತ್ತಿನ್ನೇನು ಎಂದು ದಾಖಲೆ ಪ್ರದರ್ಶಿಸಿದರು. ಪಕ್ಷವಿರೋಧಿ ಚಟುವಟಿಕೆಗಾಗಿ ಮಾತ್ರ ಉಚ್ಚಾಟನೆ ಮಾಡಲಾಗಿದೆ. 2028ಕ್ಕೆ ಯಾರು ಇರುತ್ತಾರೋ ಗೊತ್ತಿಲ್ಲ ಎಂದರು.
ಅವರು ವರಿಷ್ಠರ ಬಳಿ ಹೋದರೆ, ನಾವೂ ಹೈಕಮಾಂಡ್ ಬಳಿಗೆ ಹೋಗುತ್ತೇವೆ. ಪಕ್ಷವಿರೋಧ ಚಟುವಟಿಕೆ ಮಾಡಿದ ಅವರು ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಇರಬಾರದು. ಮಗ್ಗಲ ಮುಳ್ಳು ಇದ್ದಂತೆ ಎಂದರು.
ಶಿಗ್ಗಾಂವಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ಉಮೇಶ ಅಂಗಡಿ, ಸೋಮಶೇಖರಯ್ಯ ಗೌರಿಮಠ, ಮಂಜುನಾಥ ಪ್ಯಾಟಿ, ಬಸವನಗೌಡ ರಾಮನಗೌಡರ, ರೇಣುಕಗೌಡ ಪಾಟೀಲ, ಅನೀಲ ಸಾತಣ್ಣವರ, ಮಂಜುನಾಥ ನಂಜಪ್ಪನವರ, ಸಚಿನ ಮಡಿವಾಳರ, ಸತೀಶ ಬಾಣದ, ಇತರರಿದ್ದರು.
ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕಿತ್ತು
ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಸುಭಾಷ ಚವ್ಹಾಣ ಮಾತನಾಡಿ, ಕಂಬಾಳಿಮಠ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರೇ ಆಗಿದ್ದರೆ ಪಕ್ಷದ ಚೌಕಟ್ಟಿನಲ್ಲಿ ನಾಯಕರ ಬಳಿ ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಬಹಿರಂಗವಾಗಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.
ಎಂಪಿ ಎಲೆಕ್ಷನ್ ಆರೋಪ ಸುಳ್ಳು
ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಲ್ಹಾದ ಜೋಶಿ ಅವರ ಹಿನ್ನೆಡೆಗೆ ಬೊಮ್ಮಾಯಿ ಬೆಂಬಲಿಗರು ಕಾರಣ ಎಂಬ ಆರೋಪ ಶುದ್ಧ ಸುಳ್ಳು. ಹಿಂದಿನ ಎಲ್ಲ ಚುನಾವಣೆಯಲ್ಲಿ ಶಿಗ್ಗಾಂವಿಯಲ್ಲಿ ಹೆಚ್ಚಿನ ಲೀಡ್ ಕೊಡಿಸಿದ್ದಾರೆ. ಜತೆಗೆ ಕಲಘಟಗಿ, ಕುಂದಗೋಳ, ನವಲಗುಂದ ಭಾಗದಲ್ಲಿ ಹೆಚ್ಚಿನ ಮತಗಳನ್ನು ಪಡೆಯುವಲ್ಲಿ ಬೊಮ್ಮಾಯಿ ಅವರ ಪಾತ್ರ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಸುಭಾಷ ಚವ್ಹಾಣ ಹೇಳಿದರು.