ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಭರತ ಬೊಮ್ಮಾಯಿ; ಶಿಗ್ಗಾಂವಿಯಲ್ಲಿ ತಂದೆಯ ಲಕ್ಕಿ ಕಾರನ್ನೇರಿ ಬಂದ ಪುತ್ರ

24 Bharat Bommai
Published on

ಹಾವೇರಿ (ಶಿಗ್ಗಾಂವಿ): ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯ ಅಖಾಡಕ್ಕೆ ಧುಮುಕಿರುವ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಶಿಗ್ಗಾಂವಿಯ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಸಾಂಕೇತಿಕವಾಗಿ ಸರಳವಾಗಿ ನಾಮಪತ್ರ ಸಲ್ಲಿಸಿದರು. ತಮ್ಮ ತಂದೆ ಬಸವರಾಜ ಬೊಮ್ಮಾಯಿ ಅವರ ಲಕ್ಕಿ ಕಾರು ಮಹೀಂದ್ರಾ ಸ್ಕಾರ್ಪಿಯೋ (ಕೆಎ25 ಎಂಸಿ 2691) ಕಾರಲ್ಲಿ ಪತ್ನಿ ಇಬ್ಬನಿ ಹಾಗೂ ಪಕ್ಷದ ಮುಖಂಡರೊಂದಿಗೆ ಆಗಮಿಸಿ ಚುನಾವಣಾಧಿಕಾರಿ ಮಹ್ಮದ್ ಖಿಜರ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭರತ, ಈ ಚುನಾವಣೆಯಲ್ಲಿ ಜನರ ಬಳಿ ಏನೆಂದು ಮನವಿ ಮಾಡುತ್ತೀರಿ ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದುವರೆಗೂ ನಮ್ಮ ತಂದೆ ಬಸವರಾಜ ಬೊಮ್ಮಾಯಿಯವರಿಗೆ ಆಶೀರ್ವಾದ ಮಾಡಿದ್ದೀರಿ. ಈಗ ನನಗೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಾನು ಬಡವರು, ಯುವಕರು, ಮಹಿಳೆಯರ ಪರವಾಗಿ ಕೆಲಸ ಮಾಡುತ್ತೇನೆ. ಚುನಾವಣೆಯಲ್ಲಿ ಜಯ ಗಳಿಸಿದರೆ ಅನೇಕ ಯೋಜನೆಗಳನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಆ ಕುರಿತು ತಿಳಿಸುವುದಾಗಿ ಹೇಳಿದರು.

ಇಂದು ಬೃಹತ್ ಮೆರವಣಿಗೆ

ತಾಯಿಯವರ ಸೂಚನೆಯಂತೆ ಒಳ್ಳೆಯ ಮುಹೂರ್ತದಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ತಂದೆ-ತಾಯಿ ಆಶೀರ್ವಾದ, ಹಿರಿಯರ ಆಶೀರ್ವಾದ, ಪಕ್ಷದ ವರಿಷ್ಠರ ಆಶೀರ್ವಾದದಿಂದ ನಾನು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಅ.25ರಂದು ಬೃಹತ್ ಮೆರವಣಿಗೆ ಮೂಲಕ ಬಹಿರಂಗವಾಗಿ ನಾಮಪತ್ರ ಸಲ್ಲಿಸುತ್ತೇನೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ, ಸೇರಿ ಹಲವು ನಾಯಕರು ಸಾಕ್ಷಿಯಾಗಲಿದ್ದಾರೆ ಎಂದು ಭರತ ಬೊಮ್ಮಾಯಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net