ಷೇರು ಹಣ ಕೊಡಲಿಲ್ಲವೆಂದು ಮಾಲೀಕನನ್ನೇ ಕಿಡ್ನಾಪ್ ಮಾಡಿದ ಷೇರುದಾರರು

Published on

ಹಾವೇರಿ: ಕಟ್ಟಿದ ಷೇರು ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಷೇರು ಸಂಸ್ಥೆಯ ಮಾಲೀಕನನ್ನು ಅಪಹರಣ ಮಾಡಿರುವ ಘಟನೆ ತಾಲೂಕಿನ ಕರ್ಜಗಿ ಬಳಿ ನಡೆದಿದೆ.
ನಗರದ ವೀರ ಮೈಯೂರ ಮಲ್ಟಿ ಟ್ರೇಡ್ ಪ್ರೈವೆಟ್ ಲಿಮಿಟೆಡ್‌ನ ಮಾಲೀಕ ಹಾಗೂ ತಾಲೂಕಿನ ಮೆಳ್ಳಾಗಟ್ಟಿ ಗ್ರಾಮದ ಶಿವಶರಣಗೌಡ ಗದಿಗೆಪ್ಪಗೌಡ ದ್ಯಾಮನಗೌಡ್ರ ಅಪಹರಣಕ್ಕೊಳಗಾದ ವ್ಯಕ್ತಿ.
ತಾಲೂಕಿನ ತವರಮಳ್ಳಿಹಳ್ಳಿ ನಿವಾಸಿ ಗುರುಮೂರ್ತಿ ತೆಂಬದ, ದೇವಿಹೊಸೂರ ಗ್ರಾಮದ ಮುರುಗೇಶಸ್ವಾಮಿ ಹುಲಿಕಂತಿಮಠ, ರಾಣೆಬೆನ್ನೂರ ತಾಲೂಕಿನ ಹೆಡಿಯಾಲ ಗ್ರಾಮದ ಮಿಥುನ್ ಛಪ್ಪರದಹಳ್ಳಿ ಹಾಗೂ ಇತರರು ಅಪಹರಿಸಿದ ಆರೋಪಿಗಳು. ಘಟನೆ ಕುರಿತು ಸವಣೂರ ತಾಲೂಕಿನ ನದಿನೀರಲಗಿ ಗ್ರಾಮದ ಮೈಲಾರೆಪ್ಪ ಮಂಡಬಮತ್ತೂರ ಎಂಬುವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ವಿವರ…
ಶಿವಶರಣಗೌಡ ಹಾವೇರಿಯಲ್ಲಿ ಆರಂಭಿಸಿದ ವೀರ ಮೈಯೂರ ಮಲ್ಟಿ ಟ್ರೇಡ್ ಪ್ರೈವೆಟ್ ಲಿಮಿಟೆಡ್‌ನಲ್ಲಿ ಎಲ್ಲರೂ ಹಣ ಹೂಡಿಕೆ ಮಾಡಿದ್ದರು. ಆ ಹಣವನ್ನು ತೆಗೆದುಕೊಂಡು ಶಿವಶರಣಗೌಡ ಬೇರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು. ಆದರೆ, ಕರೊನಾ ಲಾಕ್‌ಡೌನ್ ಆಗಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ್ದ.
ಆದರೂ ತನ್ನ ಷೇರುದಾರರಿಗೆ ಹಂತ ಹಂತವಾಗಿ ಹಣ ಕೊಡುತ್ತಿದ್ದ. ಈ ಬಗ್ಗೆ ಮಾತನಾಡುವ ಸಲುವಾಗಿ ಮೇ 22ರಂದು ಕರ್ಜಗಿ ಬಳಿ ಮೈಲಾರೆಪ್ಪನ ಜತೆ ಬಂದಿದ್ದ. ಇಬ್ಬರು ಮಾತನಾಡುತ್ತ ನಿಂತಾಗ ನಂಬರ್ ಪ್ಲೇಟ್ ಇಲ್ಲದ ಕೀಯಾ ಸೆಲ್ಟೋಸ್ ಕಾರಿನಲ್ಲಿ ಬಂದ ಆರೋಪಿಗಳು ನಮ್ಮ ಹಣ ಯಾವಾಗ ಕೊಡುತ್ತೀಯಾ ಎಂದು ಜಗಳ ತೆಗೆದು ಏಕಾಏಕಿ ಶಿವಶರಣಗೌಡ ಅವರನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net