ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ 30ರಂದು; ಗೌರವಾಧ್ಯಕ್ಷ ಅಜಿತ ಮಾಗಾವಿ ಮಾಹಿತಿ

27 Banajiga Sangha
Published on

ಹಾವೇರಿ: ಬಣಜಿಗ ಸಮಾಜದ ಜನರ ಅಭಿವೃದ್ಧಿ ಸೇರಿದಂತೆ ಎಲ್ಲ ಸಮಾಜಗಳ ಒಳಿತಿನ ಉದ್ದೇಶದಿಂದ ಹಾವೇರಿ ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಲಾಗಿದೆ. ಮೇ 30ರಂದು ಸಂಜೆ 5 ಗಂಟೆಗೆ ನಗರದ ರಜನಿ ಕನ್ವೆನ್ಷನ್ ಹಾಲ್‌ನಲ್ಲಿ ಸಂಘದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಅಜಿತ ಸಿದ್ದೇಶ್ವರ ಮಾಗಾವಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಂಘದ ಪದಾಧಿಕಾರಿಗಳ ಪದಗ್ರಹಣ ಮಾಡಲಾಗುವುದು. ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಮಾರಂಭ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನಗರ ಹಾಗೂ ಜಿಲ್ಲೆಯಾದ್ಯಂತ ನೆಲೆಸಿರುವ ಸಮಾಜದ ಜನರ ಸಂಘಟನೆ ಉದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆಯ ಕೊರತೆ ಕಾಣಿಸುತ್ತಿದ್ದು, ಇದರಿಂದ ಸಮಾಜದ ಅಭಿವೃದ್ಧಿ ಕುಂಠಿತಗೊಂಡಿದೆ. ಸಮಾಜದ ಜನರು ಹಾಗೂ ಅವರ ಮಕ್ಕಳ ಭವಿಷ್ಯಕ್ಕಾಗಿ ಎಲ್ಲ ಹಿರಿಯರು ಹಾಗೂ ಕಿರಿಯರು ಸೇರಿಕೊಂಡು ತೀರ್ಮಾನಿಸಿ ಸಂಘ ಸ್ಥಾಪಿಸಲಾಗಿದೆ. ಸಂಘದ ಮೂಲಕ ವಿವಿಧ ಕಾರ್ಯಕ್ರಮಗಳು ಹಾಗೂ ಸಮಾಜದ ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದು ತಿಳಿಸಿದರು.

ಕೆ.ಸಿ ಪಾವಲಿ ಮಾತನಾಡಿ, ಈ ಸಂಘ ನಮ್ಮ ಸಮಾಜಕ್ಕೆ ಮಾತ್ರ ಸೀಮಿತವಾಗದೇ ಸರ್ವ ಸಮಾಜಗಳ ಒಳಿತಿಗಾಗಿ ಶ್ರಮಿಸಲಿದೆ. ಬಣಜಿಗ ಸಮಾಜಕ್ಕೆ 2ಎ ಹಾಗೂ 3ಎ ಮೀಸಲಾತಿ ಸೌಲಭ್ಯ ದೊರಕಿಸಿಕೊಡಲು ಪರಿಣಾಮಕಾರಿಯಾಗಿ ಹೋರಾಡಲಾಗುವುದು. ಸರ್ಕಾರಿ ಕೆಲಸಗಳನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಮಾಜದ ಮಕ್ಕಳಿಗೆ ತರಬೇತಿ ಕೊಡಿಸಲಾಗುವದು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುವುದು. ಕಲ್ಯಾಣ ಮಂಟಪ, ಸಮುದಾಯ ಭವನ ಸೇರಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸಂಘ ಕೆಲಸ ಮಾಡಲಿದೆ ಎಂದರು.

ಸಂಘದ ಅಧ್ಯಕ್ಷ ಕಿರಣ ಕೊಳ್ಳಿ, ಕಾರ್ಯದರ್ಶಿ ಬಸವರಾಜ ಕೋರಿ, ಸಹ ಕಾರ್ಯದರ್ಶಿ ಗಿರೀಶ ಶೆಟ್ಟರ್, ಮಲ್ಲಿಕಾರ್ಜುನ ಹಿಂಚಿಗೇರಿ, ಶಿವಲಿಂಗಪ್ಪ ಗುಂಜಟ್ಟಿ, ಪ್ರವೀಣ ಶೆಟ್ಟರ್, ಪ್ರಭು ಬಸನಗೌಡ್ರ, ಶಿವಣ್ಣ ಶೆಟ್ಟರ್, ಸದಾಶಿವ ಹಿಂಚಿಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net