

ಹಾವೇರಿ: ಕಾನೂನು ವಿದ್ಯಾರ್ಥಿಗಳ ಪರೀಕ್ಷೆ ಮುಗಿಯುವವರೆಗೂ ಬಸ್ ಪಾಸ್ ವಿಸ್ತರಣೆ ಮಾಡುವಂತೆ ಒತ್ತಾಯಿಸಿ ಹಾಗೂ ಪದವಿ ಸೇರಿದಂತೆ ಯಾವುದೇ ವಿದ್ಯಾರ್ಥಿಗಳಿಗೆ ಸತಾಯಿಸದೆ ಕೂಡಲೇ ಬಸ್ ಪಾಸ್ ವಿತರಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ನಗರದ ಕೆಎಸ್‌ಆರ್‌ಟಿಸಿ ಘಟಕದಲ್ಲಿ ವ್ಯವಸ್ಥಾಪಕರ ಮೂಲಕ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಕೋವಿಡ್ ನಂತರದಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿವರೆಗೂ ಶೈಕ್ಷಣಿಕ ವರ್ಷ ಏರುಪೇರು ಆಗಿದೆ. ಅನೇಕ ಸೌಲಭ್ಯಗಳು ಸೇರಿದಂತೆ ಕೆಎಸ್‌ಆರ್‌ಟಿಸಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ನೀಡುತ್ತಿರುವ ಬಸ್ ಪಾಸ್ ಅವಧಿ ಮುಗಿದು ಸಮಸ್ಯೆ ಉಂಟಾಗಿದೆ. ಜಿಲ್ಲೆಯಲ್ಲಿ ಏಕೈಕ ಕಾನೂನು ಮಹಾವಿದ್ಯಾಲಯ ಇದ್ದು, ವಿದ್ಯಾರ್ಥಿಗಳು ಬಸ್ ಪಾಸ್ ಕೇಳಲು ಹೋದಾಗ ಸರಿಯಾಗಿ ಮಾಹಿತಿ ನೀಡದೆ ಸತಾಯಿಸುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಪರೀಕ್ಷೆ ಮುಗಿಯುವವರೆಗೂ ಪದವಿ, ಕಾನೂನು ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಕಾರ್ಯಕರ್ತರಾದ ರಮೇಶ.ಎಫ್.ಕೆ, ನಿಂಗರಾಜ ಭಂಡಾರಿ, ಬಸವರಾಜ ಕೆ., ನಾಗೇಶ ಎಲ್., ಪ್ರಮೋದ ಆರ್.ಎಲ್., ಶಿವಕುಮಾರ ಎಸ್.ಆರ್., ಬಿ.ಆರ್.ಲಮಾಣಿ, ಇತರರು ಉಪಸ್ಥಿತರಿದ್ದರು.