ಆರ್‌ಟಿಒ ಕಚೇರಿಯಿಂದ ಗಾಂಧಿಪುರಕ್ಕೆ ಬಸ್; ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ವಾಕರಸಾ ಸಂಸ್ಥೆ

5 HVR 3
Published on

ಹಾವೇರಿ: ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ವಾಕರಸಾ ಸಂಸ್ಥೆ ತಾಲೂಕಿನ ಗಾಂಧಿಪುರ ಗ್ರಾಮದ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಆರ್‌ಟಿಒ ಕಚೇರಿಯಿಂದ ಗಾಂಧಿಪುರ ಗ್ರಾಮದ ಮಾರ್ಗದಲ್ಲಿ ಎರಡು ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

ನಗರದ ಆರ್‌ಟಿಒ ಕಚೇರಿ ಸಮೀಪದ ಸಾರಿಗೆ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಗಾಂಧಿಪುರ ಕಾಲೇಜಿನ ಸಾರಿಗೆ ಬಸ್‌ನ ಸಮಸ್ಯೆ ಪರಿಹಾರಕ್ಕಾಗಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಭೆ ನಡೆಸಿದರು. ಸೋಮವಾರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಭೆ ಕರೆದಿದ್ದ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಎಲ್ಲೆಡೆ ಸಮರ್ಪಕ ಬಸ್ ವ್ಯವಸ್ಥೆ, ಗಾಂಧಿಪುರದಿಂದ ಹಾವೇರಿ ನಗರಕ್ಕೆ ವಾರದಲ್ಲಿ ಎರಡು ದಿನ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದು, ವಿದ್ಯಾರ್ಥಿಗಳ ಟಿಕೆಟ್ ದರ ಕಡಿತಗೊಳಿಸುವುದು, ಸೇರಿ ಇತರ ಬೇಡಿಕೆಗಳ ಕುರಿತು ಚರ್ಚಿಸಲಾಯಿತು.

ಸಾರಿಗೆ ಸಂಚಾರ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಟಿಓ) ಅಶೋಕ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳಲ್ಲಿ ಮುಖ್ಯವಾಗಿ ಆರ್‌ಟಿಒನಿಂದ ಗಾಂಧಿಪುರಕ್ಕೆ ಎರಡು ಬಸ್ ಸಂಚಾರ ಆರಂಭಿಸಲಾಗುವುದು. ವಿದ್ಯಾರ್ಥಿಗಳನ್ನು ಸರಿಯಾಗಿ ಹತ್ತಿಸಿಕೊಂಡು ಹೋಗಲು ಸಿಬ್ಬಂದಿಗೆ ಸೂಚಿಸಲಾಗುವುದು, ಕಾಲೇಜ್ ಎದುರು ನಿಲುಗಡೆ ಬೋರ್ಡ್ ಹಾಕಲಾಗುವುದು ಎಂದು ಭರವಸೆ ನೀಡಿದರು.

ಸಾರಿಗೆ ಘಟಕ ವ್ಯವಸ್ಥಾಪಕ ಜಿ.ಬಿ.ಅಡರಗಟ್ಟಿ, ಟಿಐ ಕುಮಾರ ತೋಟಗೇರ, ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್, ಕಾಲೇಜ್ ಘಟಕದ ಅಧ್ಯಕ್ಷ ತಿರಕಪ್ಪ ಬಾತಿ, ಕಾರ್ಯದರ್ಶಿ ಲಕ್ಷ್ಮೀ ಲಮಾಣಿ, ಲಿಂಗರಾಜ ಸಿ.ಎಂ., ಜ್ಯೋತಿ ಪಟ್ಟಣಶೆಟ್ಟಿ, ಸಂಜನಾ ಬಾರ್ಕಿ, ಇತರರು ಸಭೆಯಲ್ಲಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net