ಪದವಿ ಕಾಲೇಜ್‌ಗಳ ಅಂಕಪಟ್ಟಿ ಸಮಸ್ಯೆ ಬಗೆಹರಿಸಿ; 200 ಕೋಟಿ ರೂ. ಅವ್ಯವಹಾರ ಆರೋಪ ತನಿಖೆ ಮಾಡಿ; ಉನ್ನತ ಶಿಕ್ಷಣ ಸಚಿವರಿಗೆ ಎಸ್‌ಎಫ್‌ಐ ಮನವಿ

3 HVR 3
Published on

ಹಾವೇರಿ: ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ನಾಲ್ಕು ವರ್ಷಗಳಿಂದ ವಿತರಣೆ ಮಾಡದಿರುವ ವಿಳಂಬ ನೀತಿಯನ್ನು ಖಂಡಿಸಿ, ಲೋಪದೋಷ ಸರಿಪಡಿಸಿ ಶೀಘ್ರವಾಗಿ ವಿತರಿಸುವಂತೆ ಹಾಗೂ ವಿವಿಗಳಿಗೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ಸದಸ್ಯರು ನಗರದಲ್ಲಿ ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಎನ್‌ಇಪಿಯಲ್ಲಿ ಆನ್‌ಲೈನ್ ಅಂಕಪಟ್ಟಿ ಜತೆಗೆ ಮುದ್ರಿತ ಅಂಕಪಟ್ಟಿ ನೀಡಬೇಕೆಂಬ ನಿಯಮವಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು 22-12-2022ರಂದು ಎಲ್ಲ ವಿಶ್ವವಿದ್ಯಾನಿಲಯಗಳು ಮುದ್ರಿತ ಅಂಕಪಟ್ಟಿ ವಿತರಿಸಬೇಕೆಂದು ಆದೇಶ ನೀಡಿದ್ದರೂ ವಿವಿಗಳು ಪಾಲಿಸುತ್ತಿಲ್ಲ. ಆದ್ದರಿಂದ ತಕ್ಷಣ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಂಕಪಟ್ಟಿ ವಿತರಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಂಕಪಟ್ಟಿ ವಿತರಣೆಯಲ್ಲಿ ಸುಮಾರು 200 ಕೋಟಿ ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಆದರಿಂದ ಅಂಕಪಟ್ಟಿ ವಿತರಣೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಹಾವೇರಿ ವಿಶ್ವವಿದ್ಯಾಲಯ ಸೇರಿದಂತೆ ಎಲ್ಲ ವಿವಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ನಿಗದಿತ ಸಮಯದಲ್ಲಿ ಫಲಿತಾಂಶ ಕೊಡಬೇಕು. ಪದವಿ ಮುಗಿಸಿ ಮುಂದಿನ ಬಿಎಡ್ ವಿದ್ಯಾಭ್ಯಾಸ ಕ್ಕೆ ಅಂಕಪಟ್ಟಿ ಮೇಲೆ ಕುಲಸಚಿವರ ಸಹಿ ಮತ್ತು ಮೊಹರು ಕಡ್ಡಾಯವಾಗಿ ಹಾಕಬೇಕು ಎಂದು ಒತ್ತಾಯಿಸಿದರು.

ಮನವಿ ಪತ್ರ ಸ್ವೀಕರಿಸಿ ಸಚಿವ ಡಾ.ಸುಧಾಕರ ಮಾತನಾಡಿ, ಯುಸಿಸಿಎಂಎಸ್ ತಂತ್ರಾಂಶ ಸಮಸ್ಯೆ ಇದೆ. ಕೂಡಲೇ ಸರಿಪಡಿಸಲು ಇಲಾಖೆಗೆ ತಿಳಿಸುತ್ತೇವೆ. ವಿದ್ಯಾರ್ಥಿ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಕಾಲೇಜ್ ಘಟಕದ ಅಧ್ಯಕ್ಷ ತಿರಕಪ್ಪ ಬಾತಿ, ಕಾರ್ಯದರ್ಶಿ ಲಕ್ಷ್ಮೀ ಲಮಾಣಿ, ಉಪಾಧ್ಯಕ್ಷೆ ಜ್ಯೋತಿ ಪಟ್ಟಣಶೆಟ್ಟಿ, ಸಂಜನಾ ಬಾರ್ಕಿ, ಕುಮಾರಸ್ವಾಮಿ ಕೆ.ಟಿ, ಕುಬೇರ ಗೋಣಿ, ಅಜೇಯ ಲಮಾಣಿ, ಶ್ವೇತಾ ಬೇವಿನಹಳ್ಳಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net