

ಹಾವೇರಿ: ನಗರದ ಜಿಲ್ಲಾ ಗುರು ಭವನದಲ್ಲಿ ಇತ್ತೀಚೆಗೆ ಎಸ್‌ಎಫ್‌ಐನಿಂದ ಆಯೋಜಿಸಿದ್ದ ರಾಜ್ಯಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶದಲ್ಲಿ ಜನಜಾಗೃತಿ ಜತೆಗೆ ಮನರಂಜನೆ ನೀಡುವ ಎರಡು ನಾಟಕಗಳು ಪ್ರದರ್ಶನಗೊಂಡವು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ರಚಿಸಿ, ನಿರ್ದೇಶಿಸಿದ ‘ಹಾಸ್ಟೆಲ್’ ಎಂಬ ನಾಟಕ ಹಾಸ್ಟೆಲ್‌ಗಳ ಅವ್ಯವಸ್ಥೆ ಕುರಿತು ಬೆಳಕು ಚೆಲ್ಲಿತು. ಈಗಿರುವ ವ್ಯವಸ್ಥೆಯಲ್ಲಿ ಅನುದಾನವನ್ನು ಹೆಚ್ಚಿಸುವ ಕುರಿತ ಮಾಹಿತಿ ಒದಗಿಸಿತು. ‘ಬೇಕೇ ಬೇಕು ನ್ಯಾಯ ಬೇಕು’ ಎಂಬ ಸಂಭಾಷಣೆಯ ಪ್ರತಿಭಟನೆಯೊಂದಿಗೆ ಆರಂಭವಾಗುವ ನಾಟಕ ನಂತರ ನಾನಾ ತಿರುವುಗಳನ್ನು ಪಡೆಯುತ್ತದೆ. ಅಲ್ಲಿಗೆ ಆಗಮಿಸಿದ ಪತ್ರಕರ್ತ ಪ್ರತಿಭಟನಾಕಾರರನ್ನು ಶಾಸಕರ ಬಳಿ ಕರೆದೊಯ್ದು ಸಮಸ್ಯೆಗಳ ಪರಿಹಾರಕ್ಕೆ ಹೊಸ ಆಯಾಮ ನೀಡುತ್ತಾನೆ.
ಶಾಸಕರು ಎಲ್ಲ ಸಮ್ಮಸ್ಯೆಗಳನ್ನು ಆಲಿಸಿ, ಸಚಿವರ ಬಳಿ ಬೆಂಗಳೂರಿಗೆ ವಿದ್ಯಾರ್ಥಿ ಸಮೂಹವನ್ನು ಕರೆದೊಯ್ದಗ ಸಚಿವರು ಈ ಬಜೆಟ್‌ನಲ್ಲಿ ಅನುದಾನ ಹೆಚ್ಚಿಸುವುದಾಗಿ ಭರವಸೆ ನೀಡುತ್ತಾರೆ. ಜೈಕಾರದೊಂದಿಗೆ ನಾಟಕ ಮುಕ್ತಾಯವಾಗುತ್ತದೆ.
30 ವಿದ್ಯಾರ್ಥಿಗಳು ನಾಟಕದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಪತ್ರಕರ್ತರಾಗಿ ನಿಂಗಪ್ಪ ಆರೇರ, ಶಾಸಕರಾಗಿ ಸತೀಶ ಕುಲಕರ್ಣಿ, ಸಚಿವರಾಗಿ ಬಸವರಾಜ ಪೂಜಾರ, ಆಪ್ತ ಕಾರ್ಯದರ್ಶಿಯಾಗಿ ನಾರಾಯಣ ಕಾಳೆ ಪ್ರಮುಖ ಪಾತ್ರಧಾರಿಗಳಾಗಿದ್ದರು.
ಮುಖಂಡರಾದ ಪರಿಮಳಾ ಜೈನ್, ಡಾ.ರಾಧಾ, ಬಸವರಾಜ ಎಸ್., ರೇಣುಕಾ ಕಹಾರ, ಚೈತ್ರಾ ಕೊರವರ, ಅರುಣ ನಾಗವತ, ಧನುಷ ದೊಡ್ಡಮನಿ, ಪೂರ್ಣಿಮಾ ಡವಗಿ, ನಾಗರಾಜ ಕಾಯಕದ, ವಿಶ್ವ ಈಳಗೇರ, ಬೀರೇಶ, ಪವನ ಜಾಡರ, ಪ್ರಿಯಾಂಕ, ಭೂಮಿಕಾ ಮಾದರ, ಸಂಜನಾ ಆಡೂರ, ಕೀರ್ತಿ ಲಮಾಣಿ, ಪವಿತ್ರ ಬೆಳಕೇರಿ, ಭಾರತಿ, ಭರತ ಮಡಿವಾಳರ, ಮಾರುತಿ ಲಂಕೇರ, ಮಹೇಶ ಮರೋಳ, ವನಜಾಕ್ಷ ಬುಳ್ಳಮ್ಮನವರ, ಭವ್ಯ ಲಕರೆಡ್ಡಿ ಮುಂತಾದವರು ಭಾಗವಹಿಸಿದ್ದರು.
ಮನೆಗೆದ್ದ ‘ಮೂಕಿಟಾಕಿ’
ಎ.ಎಸ್. ಮೂರ್ತಿ ರಚನೆಯ ರಾಘವೇಂದ್ರ ಕಬಾಡಿ ನಿರ್ದೇಶನದ ‘ಮೂಕಿಟಾಕಿ’ ಹಾಸ್ಯಮಯ ನಾಟಕ ಪ್ರೇಕ್ಷಕರ ಮನೆ ಗೆದ್ದಿತು. ನಾಟಕದಲ್ಲಿ ಎಸ್.ಆರ್.ಎಸ್ ಕಲಾ ತಂಡದ ಮೂವರು ಪಾತ್ರಧಾರಿಗಳು ಅಭಿನಯಿಸಿದ ನಾಟಕ ನೋಡುಗರಲ್ಲಿ ನಗುವಿನ ಕಚಗುಳಿ ನೀಡಿತು.
ನಾಯಕ ಶಂಕ್ರಪ್ಪ ( ಶಂಕರ ತುಮ್ಮಣ್ಣನವರ) ತಪಸ್ಸು ಮಾಡಿ ಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ನನಗೊಂದು ಚಂದನ ಹೆಂಡತಿ ಬೇಕು ಎಂದು ವರ ಕೇಳುತ್ತಾನೆ. ಬ್ರಹ್ಮ (ರಾಘವೇಂದ್ರ ಕಬಾಡಿ) ತತಾಸ್ಥು ಎಂದು ಒಬ್ಬ ಚೆಲುವೆಯನ್ನು (ಶಶಿಕಲಾ ಅಕ್ಕಿ) ಸೃಷ್ಟಿಸುತ್ತಾನೆ. ಖುಷಿಯಿಂದ ಶಂಕ್ರಪ್ಪ ಪ್ರೀತಿಸಲು ಹೋದಾಗ ಅವಳು ಮೂಕಿಯಾಗಿರುತ್ತಾಳೆ. ಆಕೆಯನ್ನು ನಿರಾಕರಿಸಿದ ಶಂಕ್ರಪ್ಪ ಮತ್ತೆ ತಪಸ್ಸು ಮಾಡಿ ಬಾಯಿ ಇರುವ ‘ಟಾಕಿ’ ಹೆಂಡತಿ ಬೇಕು ಎಂದು ಕೇಳುತ್ತಾನೆ.
ಟಾಕಿ ಹೆಂಡತಿ ಕಾರು ಬಂಗಲೆ, ಐಷಾರಾಮಿ ಬದುಕು ಬೇಕೆಂದು ಹಲವು ಷರತ್ತುಗಳನ್ನು ಹಾಕಿದಾಗ ಕಂಗಾಲಾದ ಶಂಕ್ರಪ್ಪ ಮತ್ತೆ ತಪಸ್ಸು ಮಾಡಿ, ಬ್ರಹ್ಮನನ್ನು ಪ್ರಾರ್ಥಿಸಿ, ‘ನನ್ನನ್ನು ಮೂಕ, ಕಿವುಡ, ಕುರುಡನನ್ನಾಗಿ ಮಾಡು’ ಎಂದು ಕೇಳುತ್ತಾನೆ. ಇದ್ದುದರಲ್ಲಿಯೇ ಸಂತೋಷ ಪಡಬೇಕು ಎಂಬ ಸಂದೇಶವನ್ನು ಬ್ರಹ್ಮ ಕೊನೆಯಲ್ಲಿ ಸಾರುತ್ತಾನೆ.