ನೀರು, ಯುಜಿಡಿ ಸಮಸ್ಯೆ ವಿರುದ್ಧ 12ರಂದು ಪ್ರತಿಭಟನೆ

Published on

ಹಾವೇರಿ: ಜಿಲ್ಲಾ ಕೇಂದ್ರವಾಗಿ 25 ವರ್ಷ ಕಳೆದರೂ ನಗರದಲ್ಲಿ ಯುಜಿಡಿ ಸಮಸ್ಯೆ ಹಾಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ಸಮಸ್ಯೆ ಬಗೆಹರಿಸುವಂತೆ ಆಗ್ರಹಸಿ ಜೂ.12ರಂದು ಬೆಳಗ್ಗೆ 11 ಗಂಟೆಗೆ ನಗರಸಭೆ ಎದುರು ಪ್ರತಿಭಟಿಸಲಾಗುವುದು ಎಂದು ಹಿರಿಯ ನಾಗರಿಕರ ವೇದಿಕೆ ಸದಸ್ಯ ಶಿವನಗೌಡ ತಿಪ್ಪನಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ಯುಜಿಡಿ ಆರಂಭಿಸಲಾಗಿದ್ದು, ಈವರೆಗೆ ಪೂರ್ಣಗೊಂಡಿಲ್ಲ. 2016ರಲ್ಲಿ 24/7 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರಂಭವಾಗಿದ್ದು ಅದೂ ಅಪೂರ್ಣವಾಗಿದೆ. ಇದರಿಂದ ನಗರದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನಲ್ಲಿ ವರದಾ, ತುಂಗಭದ್ರಾ ನದಿಗಳಿದ್ದರೂ 20, 25 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಹಲವೆಡೆ ನೀರು ಅನಗತ್ಯವಾಗಿ ಪೋಲಾಗುತ್ತಿದ್ದರೂ ದುರಸ್ತಿ ಮಾಡುತ್ತಿಲ್ಲ ಎಂದರು.
ಈ ಸಮಸ್ಯೆ ಕುರಿತು ಕಳೆದ ಮೂರು ವರ್ಷಗಳಿಂದ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಆಯುಕ್ತರು, ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು, ಶಾಸಕರಿಗೆ ಅನೇಕ ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಯವರು ಒಂದು ಬಾರಿ ಸಭೆ ನಡೆಸಿ, ಮತ್ತೆ ಸಭೆ ಕರೆಯುವುದಾಗಿ ಹೇಳಿದರು. ಆದರೆ, ಈವರೆಗೆ ಸಭೆ ಕರೆದಿಲ್ಲ.
ಚುನಾವಣೆ ಬಂದಾಗ ಎಲ್ಲರೂ ಕಾಲಿಗೆ ಬೀಳುತ್ತಾರೆ. ಗೆದ್ದ ಕೂಡಲೇ ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಾರೆ. ನಂತರ ಮರೆತುಬಿಡುತ್ತಾರೆ. ಈ ಬಗ್ಗೆ ಹಾವೇರಿಯ ಜನರೆಲ್ಲ ಒಂದಾಗಿ, ಜಾತೀಯತೆ ಮರೆತು ಪ್ರತಿಭಟನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಬಿ.ಅಣ್ಣಿಗೇರಿ, ಡಾ.ಬಿ.ಸಿ.ಬನ್ನೂರ, ನಾಗರಾಜ ವಿಭೂತಿ, ಚಿದಾನಂದಪ್ಪ ಯು., ಪಿ.ಬಿ.ಬಾವನೂರ, ಮತ್ತಿತರರು ಪಾಲ್ಗೊಂಡಿದ್ದರು.
ಸಮಿತಿ ರಚಿಸಲು ಒತ್ತಾಯ
ನೂತನ ಶಾಸಕ ರುದ್ರಪ್ಪ ಲಮಾಣಿ ಇತ್ತೀಚೆಗೆ ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆ ಕುರಿತು ಅಧಿಕಾರಿಗಳಿಗೆ ತರಾಟೆ ತೆರೆದುಕೊಂಡಿದ್ದಾರೆ. ಇದು ಅಧಿಕಾರಿಗಳ ಕೈಯಲ್ಲಿ ಇಲ್ಲ. ಉನ್ನತ ಮಟ್ಟದಲ್ಲಿ ನಿರ್ಧಾರವಾಗಬೇಕು. ಯುಜಿಡಿ ಹಾಗೂ ನೀರಿನ ಶಾಶ್ವತ ಸಮಸ್ಯೆ ಬಗ್ಗೆ ಒಂದು ಸಮಿತಿ ರಚಿಸಿ ಸಮಸ್ಯೆಗೆ ನಾಂದಿ ಹಾಡಬೇಕು ಎಂದು ಹಿರಿಯ ನಾಗರಿಕರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net