ವಿಕಲಚೇತನರ ಸೌರ ಸ್ವ-ಉದ್ಯೋಗ ಮೇಳ ಜು.20ರಂದು; ಸೆಲ್ಕೋ ಫೌಂಡೇಶನ್, ಜಿಪಂನಿಂದ ಆಯೋಜನೆ

Published on

ಹಾವೇರಿ: ಸೆಲ್ಕೋ ಫೌಂಡೇಶನ್, ಜಿಲ್ಲಾ ಪಂಚಾಯಿತಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಜು.20ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ‘ವಿಶೇಷಚೇತನರ ಸೌರ ಸ್ವ-ಉದ್ಯೋಗ ಮೇಳ’ ಆಯೋಜಿಸಲಾಗಿದೆ ಎಂದು ಸೆಲ್ಕೋ ಫೌಂಡೇಶನ್ ಪ್ರಾಜೆಕ್ಟ್ ಮ್ಯಾನೇಜರ್ ಪ್ರಕಾಶ ಮೇಟಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 13 ವರ್ಷಗಳಿಂದ ದೇಶಾದ್ಯಂತ ಸುಸ್ಥಿರ ಅಭಿವೃದ್ಧಿ ಹಾಗೂ ಸೌರ ವಿದ್ಯುತ್ ವಿಭಾಗದಲ್ಲಿ ಸೆಲ್ಕೋ ಫೌಂಡೇಶನ್ ಹೊಸ ಆವಿಷ್ಕಾರ ಮಾಡುತ್ತ ಬಂದಿದೆ. ಕಳೆದ ವರ್ಷ ಬೆಳಗಾವಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಹಾವೇರಿ ಜಿಲ್ಲೆಯಲ್ಲಿ ವಿಕಲಚೇತನರಿಗೆ ಸ್ವಾವಲಂಬನೆ ಜೀವನ ಕಟ್ಟಿಕೊಡುವ ಉದ್ದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಅಕ್ಷಯ ಶ್ರೀಧರ ಉದ್ಘಾಟಿಸಲಿದ್ದಾರೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ 88ಕ್ಕೂ ಅಧಿಕ ವಿಕಲಚೇತನರಿಗೆ ಸೌರ ವಿದ್ಯುತ್ ಮುಖಾಂತರ ಜೀವನೋಪಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಸೌರ ವಿದ್ಯುತ್‌ನಿಂದ ಚಾಲನೆಯಾಗುವ ಬಟ್ಟೆ ಹೊಲೆಯುವ ಯಂತ್ರ(ರಾಟೆ), ಖಾರ ಕುಟ್ಟುವ ಮಿಷನ್, ರೊಟ್ಟಿ ತಯಾರಿಸುವ ಯಂತ್ರ, ಗೂಡಗಂಡಿಗಳಲ್ಲಿ ಝರಾಕ್ಸ್ ಮಿಷನ್‌ಗಳನ್ನು ಹಾಕಿಕೊಂಡು ಅನೇಕ ವಿಕಲಚೇತನರು ಬದುಕು ಕಟ್ಟಿಕೊಂಡಿದ್ದಾರೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿಕಲಚೇತನರಿಗೆ ಮಾಹಿತಿ ನೀಡಲಾಗುವುದು. ಆಸಕ್ತರಿಗೆ ಸಂಸ್ಥೆಯಿಂದ ಶೇ.50ರಷ್ಟು ಸಬ್ಸಿಡಿ ಜತೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಸೌರ ವಿದ್ಯುತ್‌ನಿಂದ ಚಾಲನೆಯಾಗುವ ಯಂತ್ರಗಳನ್ನು ಬಳಸಿಕೊಂಡು ಮನೆ, ಗೂಡಂಗಡಿಗಳಲ್ಲಿ ವಿಕಲಚೇತನ ಮಹಿಳೆಯರು, ರೈತರು, ಯುವಕ, ಯುವತಿಯರು ಸ್ವ ಉದ್ಯೋಗ ಮಾಡಿ ಯಶಸ್ವಿಯಾಗಿರುವ ವಿಲಕಚೇತನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಂದ ಸೌರ ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಯಂತ್ರಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ಮಡಿವಾಳರ, ರಘು ಜೋಗಿಹಳ್ಳಿ, ತಿಪ್ಪೇಶ ಬಿ.ಜಿ, ನಿಂಗಪ್ಪ ದೊಡ್ಡಮನಿ, ಸಿದ್ದನಗೌಡ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net