ಒಳ ಮೀಸಲಾತಿಯಿಂದ ಬಂಜಾರ ಸಮುದಾಯಕ್ಕೆ ಅನ್ಯಾಯ; ಕಾಯ್ದೆ ವಾಪಸ್ ಪಡೆಯಲು ಸಿಎಂಗೆ ಆಗ್ರಹ

25 HVR 4
Published on

ಹಾವೇರಿ: ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯಲ್ಲಿ ದೋಷಗಳಿವೆ, ಬಂಜಾರ, ಬೋವಿ, ಕೊರಚ, ಕೊರಮ, ಮತ್ತಿತರ ಸಮುದಾಯಗಳಿಗೆ ಅನ್ಯಾಯವಾಗಿದೆ. ಈ ವರದಿಯನ್ನು ಏಕಪಕ್ಷೀಯವಾಗಿ ಅಂಗೀಕರಿಸಬಾರದು ಎಂದು ಒತ್ತಾಯಿಸಿ, ಬಂಜಾರ ಸಮಾಜಕ್ಕೆ ಒಳ ಮೀಸಲಾತಿಯಲ್ಲಿ ಅನ್ಯಾಯ ಆಗಿರುವುದನ್ನು ಖಂಡಿಸಿ ಬಂಜಾರ ಸಮುದಾಯದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಡಾ.ವಿಜಯ ಮಹಾಮತೇಶ ದಾನಮ್ಮನವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಒಳ ಮೀಸಲಾತಿಯಲ್ಲಿ ಬಲಗೈ, ಎಡಗೈ ಸಮುದಾಯಕ್ಕೆ ತಲಾ ಶೇ.6ರಷ್ಟು ಮೀಸಲಾತಿ ನೀಡಲಾಗಿದೆ. ಉಳಿದ 59 ಜಾತಿಗಳಿಗೆ ಕೇವಲ ಶೇ.5ರಷ್ಟು ಮೀಸಲಾತಿ ನೀಡಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಸಚಿವ ಸಂಪುಟದಲ್ಲಿ ಜಾರಿ ಮಾಡಿರುವ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಈಗಾಗಲೇ ಸಾಮಾಜಿಕ ಅಸಮಾನತೆ, ಆರ್ಥಿಕ ಹಿಂಜರಿತ, ನಿರುದ್ಯೋಗದಿಂದ ಬಳಲುತ್ತಿರುವ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಮಾರಕ ಪರಿಣಾಮ ಬೀರುತ್ತದೆ.

ಜನಸಂಖ್ಯೆಗನುಣವಾಗಿ ಜಾರಿಯಾಗಬೇಕಿದ್ದ ಒಳಮೀಸಲಾತಿಯನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿದು 63 ಜಾತಿಗಳನ್ನು ಸೇರಿಸಿ ಕೇವಲ ಶೇ.5ರಷ್ಟು ಮೀಸಲಾತಿ ನೀಡಿದ್ದು ಈ ಸಮುದಾಯಗಳಿಗೆ ಮಾಡಿರುವ ಅನ್ಯಾಯವಾಗಿದ್ದು, ಮರಣ ಶಾಸನವೂ ಕೂಡ ಆಗಲಿದೆ. ರಾಜ್ಯದಲ್ಲಿ ಬಂಜಾರ ಸಮುದಾಯವು ವಲಸೆ, ಅನಕ್ಷರತೆ, ಬಡತನ ಜತೆಗೆ ಈಗಲೂ ತಾಂಡಾಗಳಲ್ಲಿ ಮೂಲ ಸೌಕರ್ಯಗಳಿಲ್ಲದೇ ಅತ್ಯಂತ ಹಿಂದುಳಿದಿದೆ. ಈ ಸಮುದಾಯದ ಶೇ.90ರಷ್ಟು ಜನ ದಿನಗೂಲಿ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಎಷ್ಟೋ ಜನರು ಈಗಲೂ ಒಂದು ಹೊತ್ತಿನ ಊಟಕ್ಕೂ ಪರದಾಡುವ ಶೋಚನೀಯ ಸ್ಥಿತಿಯಿಂದ ಬಳಲುತ್ತಿದ್ದಾರೆ. ಇಂತಹ ಸಮಯದಲ್ಲಿ 63 ಜಾತಿಗಳನ್ನು ಸೇರಿಸಿ ಕೇವಲ ಶೇ.5ರಷ್ಟು ಮೀಸಲಾತಿ ನೀಡಿದ್ದು ಮಾತ್ರ ಈ ಸಮುದಾಯಗಳ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಸಂಪುಟ ಒಪ್ಪಿರುವ ಈ ಒಳಮೀಸಲಾತಿಯನ್ನು ಮುಖ್ಯಮಂತ್ರಿ ಅವರು ಕೂಡಲೇ ಕಾಯ್ದೆ ವಾಪಸ್ ಪಡೆಯಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಸಮಾಜದ ಪ್ರಮುಖರಾದ ಈರಪ್ಪ ಲಮಾಣಿ, ರಾಮಣ್ಣ ನಾಯಕ, ಜಯರಾಮ ಮಾಳಾಪುರ, ರಾಜೇಶ ಚವ್ಹಾಣ, ಚಂದ್ರಪ್ಪ ಲಮಾಣಿ, ತಿರಕಪ್ಪ ನಾಯಕ, ಹೋಬ ನಾಯಕ, ರಮೇಶ ಹಂಚಿನಮನಿ, ಸೋಮಣ್ಣ ಲಮಾಣಿ, ಬೀರಪ್ಪ ಲಮಾಣಿ, ಕುಮಾರ ಲಮಾಣಿ, ಭೀಮಣ್ಣ ಮೇಸಿ, ಎಚ್.ಎಂ.ನಾಯಕ, ನಾಗೇಶ ಚವ್ಹಾಣ, ಮಹೇಶ ಬಣಕಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net