ಎಲ್ಲೆಡೆ ಶಾಲಾ ಪ್ರಾರಂಭೋತ್ಸವದ ಸಂಭ್ರಮ; ಹೂವು, ಚಾಕಲೇಟ್ ಕೊಟ್ಟು ಸ್ವಾಗತ; ಸಿಹಿಯೂಟ ಸವಿದ ಮಕ್ಕಳು

31 HVR 6 A
Published on

ಹಾವೇರಿ: ಬಲೂನು, ತಳಿರು, ತೋರಣಗಳಿಂದ ಸಿಂಗಾರಗೊಂಡಿದ್ದ ಶಾಲೆಗಳು, ಮಕ್ಕಳ ಸ್ವಾಗತಕ್ಕೆ ಸಜ್ಜಾಗಿದ್ದ ಬಣ್ಣ ಬಣ್ಣದ ರಂಗೋಲಿ, ನಗು ಮುಖದಿಂದ ಗುಲಾಬಿ ಹೂವು ಹಾಗೂ ಚಾಕಲೇಟ್ ಕೊಟ್ಟು ಶಾಲೆಗೆ ಸ್ವಾಗತಿಸಿಕೊಂಡ ಶಿಕ್ಷಕರು.
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶುಕ್ರವಾರ ಈ ದೃಶ್ಯ ಕಂಡು ಬಂತು. ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು, ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಂತೆ ಹಬ್ಬದ ರೀತಿಯ ವಾತಾವರಣ ಸೃಷ್ಟಿಸಿದ್ದರು. ಚಾಕಲೇಟ್, ಗುಲಾಬಿ ಹೂವು ಕೊಟ್ಟು ಸ್ವಾಗತಿಸಿದರು. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು. ಮಧ್ಯಾಹ್ನ ಬಿಸಿಯೂಟದ ಜತೆಗೆ ಪಾಯಸ, ಹುಗ್ಗಿ, ಮತ್ತಿತರ ಖಾದ್ಯ ತಯಾರಿಸಿ ಉಣಬಡಿಸಿದರು. ಹೀಗೆ ಶಾಲಾ ಪ್ರಾರಂಭೋತ್ಸವದ ಖುಷಿ ಎಲ್ಲೆಡೆ ಕಂಡುಬಂತು. ಕೆಲವೆಡೆ ಮಾತ್ರ ಮಕ್ಕಳ ಸಂಖ್ಯೆ ವಿರಳವಾಗಿತ್ತು.
ಪಠ್ಯಪುಸ್ತಕ, ಸಮವಸ್ತ್ರ ವಿತರಣೆ
ಹಾವೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 3ರಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿಶೇಷವಾಗಿ ಅಲಂಕಾರಗೊಳಿಸಲಾಗಿತ್ತು. ಶಾಲೆಗೆ ಆಗಮಿಸಿದ ಎಲ್ಲ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಪ್ರಭಾವತಿ ಕೊಪ್ಪದ ನಿತ್ಯವೂ ಶಾಲೆಗೆ ತಪ್ಪದೇ ಹಾಜರಾಗುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು. ಶಿಕ್ಷಕರಾದ ಅಕ್ಕಮ್ಮ ಪಾಟೀಲ, ರೇಷ್ಮಾ ಹುಬ್ಬಳ್ಳಿ, ಮಹೇಶ ಎಚ್., ಶ್ವೇತಾ ಎಲ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net