

ಹಾವೇರಿ: ಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಉಪವರ್ಗೀಕರಣಕ್ಕೆ ಅನುಮತಿ ಇದೆ ಎಂದು ಸುಪ್ರೀಂಕೋರ್ಟ್ ಗುರುವಾರ ಬಹುಮತದ ಮತ್ತು ಮಹತ್ವದ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಗುರುವಾರ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳಿಂದ ಸಂಭ್ರಮಾಚರಣೆ ಜರುಗಿತು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ಪದಾಧಿಕಾರಿಗಳು, ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಪರಮೇಶ್ವರ ಮೇಗಳಮನಿ ಮಾತನಾಡಿ, ಕಳೆದ ಎರಡು ದಶಕಕಗಳಿಂದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿ ಎಂದು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೋರಾಟ ಮಾಡಲಾಗಿತ್ತು. ಈ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದಿಟ್ಟ ನಿರ್ಧಾರದಿಂದ ಸದಾಶಿವ ಆಯೋಗದ ವರದಿಯ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣಗೊಳಿಸಿ ಆದೇಶಿಸಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆದು ನಮ್ಮ ಪರವಾದ ತೀರ್ಪು ಹೊರಬಿದ್ದಿದೆ. ಹಿಂದುಳಿದ ಸಮುದಾ0ುಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗದೆ. ಶೋಷಿತರ ಪರವಾಗಿ ದಿಟ್ಟ ನಿರ್ಣಯ ಕೈಗೊಂಡ ಬಸವರಾಜ ಬೊಮ್ಮಾಯಿ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳು ಋಣಿಯಾಗಿವೆ ಎಂದರು.
ಮಾದಿಗ ದಂಡೋರ ಹೋರಾಟ ಸಮಿತಿಯ ಅಧ್ಯಕ್ಷ ಸುಭಾಸ ಬೆಂಗಳೂರ, ಪ್ರಮುಖರಾದ ಅಶೋಕ ಮರಿಯಮ್ಮನವರ, ಸಂಜಯಗಾಂಧಿ ಸಂಜೀವಣ್ಣನವರ, ಫಕ್ಕೀರೇಶ ಬಣಕಾರ, ನಾಗರಾಜ ಬಣಕಾರ, ಸಂತೋಷ ಗುಡ್ಡಪ್ಪನವರ, ತಿರಕಪ್ಪ ಮೇಗಳಮನಿ, ಆನಂದ ಮುರುಡೆಪ್ಪನವರ, ಗೋವಿಂದಪ್ಪ ಹರಿಜನ, ಮಲ್ಲೇಶ ಕಡಕೋಳ, ಪ್ರಕಾಶ ಸೋಮಣ್ಣನವರ, ಚಂದ್ರಶೇಖರ ಇಚ್ಚಂಗಿ, ನಾಗರಾಜ ಶಿಡ್ಲಣ್ಣನವರ ,ಪ್ರಕಾಶ ಮರಬದ, ಇತರರಿದ್ದರು.