

ಹಾವೇರಿ: ಅಕ್ಷರ ಅರಿವು ಹಾಗೂ ಮೌಡ್ಯಗಳ ವಿರುದ್ಧ ಹೋರಾಟವನ್ನು ಪ್ರತಿಪಾದಿಸಿದ ಸಾವಿತ್ರಿಬಾಯಿ ಫುಲೆ ಅವರು ದಿಟ್ಟ ಮಹಿಳೆ. ಅವರಂತೆ ಇಂದಿನ ಮಹಿಳೆಯರು ಎಂತಹದ್ದೇ ಸಂದರ್ಭದಲ್ಲೂ ಧೈರ್ಯಗೆಡದೆ ಮುನ್ನುಗ್ಗಬೇಕು ಎಂದು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ಅಧ್ಯಕ್ಷೆ ಡಾ.ಲತಾ ಎಸ್. ಮುಳ್ಳೂರ ಕರೆ ನೀಡಿದರು.
ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ತಾಲೂಕು ಘಟಕದಿಂದ ನಗರದ ಗುರು ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ, ಶೈಕ್ಷಣಿಕ ಕಾರ್ಯಾಗಾರ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳಾ ಶಿಕ್ಷಕಿಯರ ಮೇಲೆ ಯಾವುದೇ ದೌರ್ಜನ್ಯವಾದರೆ ಕಾನೂನು ಸಲಹೆ ಕೊಡಿಸುವುದು ಜತೆಗೆ ಮಹಿಳೆಯರು ಯಾವುದೇ ರೀತಿಯ ಧೈರ್ಯಗೆಡದೇ ವೃತ್ತಿ ಕುಟುಂಬದಲ್ಲಿ ಮುನ್ನುಗ್ಗಬೇಕು ‘ಧೈರ್ಯಂ ಸರ್ವತ್ರ ಸಾಧನಂ’ ಮಹಿಳಾ ಸಬಲೀಕರಣ ನಮ್ಮ ಮುಖ್ಯ ಉದ್ದೇಶವಾಗಿದೆ. ಶಿಕ್ಷಕಿಯರಿಗೆ ತೊಂದರೆ ಉಂಟಾದಲ್ಲಿ ನಮ್ಮ ಸಂಘದ ಸಹಾಯವಾಣಿ (ಮೊ.ಸಂ.89047 72928)ಯನ್ನು ಸಂಪರ್ಕಿಸಬಹುದು ಎಂದರು.
ಉಪ ಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಶತಮಾನದ ಹಿಂದೆ ಎಲ್ಲ ರೀತಿಯ ಸಂಕಷ್ಟಗಳನ್ನು ಎದುರಿಸಿ ಮಹಿಳೆಯರಿಗೂ ಸಮಾನವಾಗಿ ಶೀಕ್ಷಣ ದೊರೆಯುವಂತೆ ಮಾಡಿದ ಸಾವಿತ್ರಿಬಾಯಿ ಫುಲೆ ಅವರು ನಿಜ ಅರ್ಥದಲ್ಲಿ ಅಕ್ಷರ ಸರಸ್ವತಿ ಎಂದರು.
ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಸಭಾಭವನಕ್ಕೆ ನಗರಸಭೆಯಿಂದ 2.30 ಗುಂಟೆ ನಿವೇಶನ ನೀಡಲಾಗಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ನಿಗದಿತ ಮೊತ್ತವನ್ನು ತುಂಬಿ ಸಂಘದ ಹೆಸರಲ್ಲಿ ಖರೀದಿಸಬೇಕು. ಈಗಾಗಲೇ ನಗರದ ಉದ್ಯಾನವನಕ್ಕೆ ಅವರ ಹೆಸರು ಇಡಲಾಗಿದೆ ಎಂದರು.
ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ವಕೀಲರಾದ ಕೆ.ಎಲ್.ಅಂಗರಕಟ್ಟೆ ಉಪನ್ಯಾಸ ನೀಡಿದರು. ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಸಂಘದ ತಾಲೂಕು ಹಾಗೂ ಜಿಲ್ಲಾಧ್ಯಕ್ಷೆ ಅಕ್ಕಮಹಾದೇವಿ ನೀರಲಗಿ, ರಾಜೇಶ್ವರಿ ಸಜ್ಜೇಶ್ವರ, ಸುರೇಶ ಕಲ್ಮನಿ, ಮಲ್ಲಿಕಾರ್ಜುನ ಶಾಂತಗಿರಿ, ಎಚ್.ಪಿ.ಬಣಕಾರ, ಪೃಥ್ವಿರಾಜ ಬೆಟಗೇರಿ, ಸಂಘದ ಪದಾಧಿಕಾರಿಗಳಾದ ಶೋಭಾ ಜಾಗಟಗೇರಿ, ರಶ್ಮಿ ನಾಗೇನಹಳ್ಳಿ, ಪ್ರಭಾವತಿ ದುರ್ಗೆ, ಉಷಾ ನವಲೆ, ಪಾರ್ವತಿ ಪಾಟೀಲ, ಮಂಜುಳಾ ಕಡಲೆ, ಪುಷ್ಪಾ ಬಂಗಾಡಿ, ಮತ್ತಿತರರು ಇದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಗೀತಾ ಎಸ್. ಸುತ್ತಕೋಟಿ ಸ್ವಾಗತಿಸಿದರು. ಕವಿತಾ ಕೆ.ಎಸ್., ದಾಕ್ಷಾಯಿಣಿಕೆ ನಿರೂಪಿಸಿದರು. ಚಂದ್ರಮ್ಮ ಬಿ. ವಂದಿಸಿದರು.