ಸಂವಿಧಾನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ; ಸಂವಿಧಾನ ಜಾಗೃತಿ ಜಾಥಾ ಸಮಾರೋಪದಲ್ಲಿ ರೇಷ್ಮಾ ಕೌಸರ್ ಕಿವಿಮಾತು

23 HVR 5
Published on

ಹಾವೇರಿ: ಭಾರತ ದೇಶ ವಿವಿಧ ಜಾತಿ, ಧರ್ಮ, ಜನಾಂಗ ಹೊಂದಿದ ವೈವಿಧ್ಯಮ ರಾಷ್ಟ್ರವಾಗಿದ್ದರೂ ಒಂದೇ ಸಂವಿಧಾನದಡಿ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತ ಅಭಿವೃದ್ಧಿ ಕಡೆ ಸಾಗುತ್ತಿದೆ. ಪ್ರತಿ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಕಂಠಪಾಠ ಮಾಡಬೇಕು. ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಎಲ್ಲರೂ ಕಾಪಾಡೋಣ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಸಮಾರಂಭಉದ್ಘಾಟಿಸಿ, ಸಂವಿಧಾನ ಪಿಠೀಕೆ ವಾಚಿಸಿ ಅವರು ಮಾತನಾಡಿದರು. ಸಾಮಾಜಿಕ ಸಮಾನತೆ, ಭ್ರಾತೃತ್ವ ಹಾಗೂ ಜ್ಯಾತೀತ ತತ್ವದ ಆಧಾರದ ಮೇಲೆ ಎಲ್ಲರನ್ನೂ ಒಳಗೊಂಡಿರುವ ಭಾರತದ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನವಾಗಿದೆ ಎಂದರು.
ಭಾರತದ ಸಂವಿಧಾನದ ಆಶಯಗಳನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಸಂವಿಧಾನ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಜನವರಿ 26ರಂದು ಆರಂಭಗೊಂಡಿದ್ದ ಜಾಥಾ ಜಿಲ್ಲೆಯಾದ್ಯಂತ ಸಂಚರಿಸಿದೆ. ಈ ಜಾಗೃತಿ ಜಾಥಾ ಮಾ.7ರವರೆಗೆ ಕಾಲೇಜುಗಳಲ್ಲಿ ಜರುಗಲಿದೆ ಎಂದರು.
ಉಪನ್ಯಾಸಕಿ ಎಸ್.ಎಸ್.ಪವಾರ ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಸಂವಿಧಾನ ಜಾಗೃತಿ ಜಾಥಾ ವಾಹನ ಚಾಲಕರು ಹಾಗೂ ಎಲ್.ಇ.ಡಿ. ಟೆಕ್ನಿಯನ್‌ಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗರಾಜ ಎನ್.ಜೆ., ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಮೃತಗೌಡ ಪಾಟೀಲ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ಪಶು ಸಂಗೋಪನೆ ಇಲಾಖೆ ಅಧಿಕಾರಿ ಪರಮೇಶ್ವರ ಹುಬ್ಬಳ್ಳಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜಾನಾಯ್ಕ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ತೇಜರಾಜ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ, ಬಸವರಾಜ ಹಾದಿಮನಿ, ರಮೇಶ ಆನವಟ್ಟಿ, ಸಂಜಯಗಾಂಧಿ, ಶಂಭು ಕಳಸದ, ಸುಭಾಸ ಬೆಂಗಳೂರು, ಎನ್.ಪಿ.ಕಾಳೆ, ಭಿಮಣ್ಣ ಯಲ್ಲಪ್ಪನವರ, ಮುತ್ತುರಾಜ ಮಾದರ, ಇತರರರು ಉಪಸ್ಥಿತರಿದ್ದರು.
ಮೆರವಣಿಗೆ
ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ರಥದ ಮೆರವಣಿಗೆ ಕಲಾ ತಂಡಗಳೊಂದಿಗೆ ಜರುಗಿತು. ಶಾಲಾ ಮಕ್ಕಳು, ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net