ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

12 HVR 4 A
Published on

ಹಾವೇರಿ: ಹಾವೇರಿ ಮತ್ತು ಶಿಗ್ಗಾಂವಿ ನಡುವೆ ಸಂಚರಿಸುವ ಸಾರಿಗೆ ಬಸ್‌ಗಳನ್ನು ತವರಮೆಳ್ಳಿಹಳ್ಳಿ ಕ್ರಾಸ್ ಬಳಿ ನಿಲುಗಡೆ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶನಿವಾರ ಏಕಾಏಕಿ ಕೆಲಕಾಲ ಬಸ್ ಸಂಚಾರ ತಡೆದು ಪ್ರತಿಭಟಿಸಿದರು.
ಸವಣೂರ ತಾಲೂಕಿನ ತವರಮೆಳ್ಳಿಹಳ್ಳಿಯಿಂದ ನಿತ್ಯ ನೂರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಾವೇರಿ ಮತ್ತು ಶಿಗ್ಗಾಂವಿಗೆ ವಿದ್ಯಾಭ್ಯಾಸಕ್ಕೆಂದು ತೆರಳುತ್ತಾರೆ. ಹಳ್ಳಿಯಿಂದ ಒಂದು ಕಿಮೀ ನಡೆದುಕೊಂಡು ರಾಷ್ಟ್ರೀಯ ಹೆದ್ದಾರಿ ಕ್ರಾಸ್‌ಗೆ ಬಂದು ನಿಲ್ಲುತ್ತಾರೆ. ಆದರೆ, ಇಲ್ಲಿ ನಿಲ್ಲಿಸಬೇಕಿದ್ದ ಬಸ್‌ಗಳು ಸರ್ವಿಸ್ ರಸ್ತೆ ಕಡೆ ಬರುವುದಿಲ್ಲ. ನೇರವಾಗಿ ಹೆದ್ದಾರಿ ಮೇಲೆ ಓಡಾಡುತ್ತಿವೆ.
ಇದರಿಂದ ತರಗತಿಗಳು ಬಂಕ್ ಆಗುತ್ತಿವೆ. ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಬಸ್‌ಗಳಿಗೆ ಅಡ್ಡಹಾಕಿ, ಸಂಚಾರ ತಡೆದು ಆಕ್ರೋಶ ಹೊರಹಾಕಿದರು. ಬಸ್ ನಿಲುಗಡೆಗೆ ಒತ್ತಾಯಿಸಿದರು.
ಕೂಡಲೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ನಿಲುಗಡೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮನೋಜ ಅಣ್ಣಿಗೇರಿ, ಭರತ್ ಆರ್.ಕೆ., ಶಿವಕುಮಾರ, ಭವ್ಯಾ, ನೇತ್ರಾವತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net