

ಹಾವೇರಿ/ ಸವಣೂರ: ನಿರಂತರ ಮಳೆಯಿಂದಾಗಿ ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಅವಳಿ ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಶುಕ್ರವಾರ ತಡರಾತ್ರಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮೃಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಯಲ್ಲವ್ವ ದೊಡ್ಡಬಸಪ್ಪ ಹರಕುಣಿ (68) ಮೃತಪಟ್ಟವರು. ತೀವ್ರವಾಗಿ ಗಾಯಗೊಂಡಿದ್ದ ಯಲ್ಲವ್ವ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಅವಳಿ ಮಕ್ಕಳು, ಸಹೋದರಿಯನ್ನು ಕಳೆದುಕೊಂಡು ದುಖಃದ ಮಡುವಿನಲ್ಲಿದ್ದ ಮನೆ ಮಾಲೀಕ ಮುತ್ತಪ್ಪನಿಗೆ ಇದೀಗ ತಾಯಿಯನ್ನೂ ಕಳೆದುಕೊಂಡಿರುವುದು ಭರಸಿಡಿಲಿನಂತೆ ಭಾಸವಾಗಿದೆ.
ಅವಘಡ ನಡೆದ ನಂತರ ಸ್ಥಳಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ಕೊಟ್ಟಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಆಗಮಿಸಿ ಮೃತರಿಗೆ ತಲಾ ಐದು ಲಕ್ಷದಂತೆ ಒಟ್ಟು 17 ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿದ್ದರು.
ಘಟನೆ ವಿವರ :
ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಸತತ ಮಳೆಯಿಂದಾಗಿ ಜು.19ರಂದು ನಸುಕಿನ ಜಾವ ಮನೆಯ ಮೇಲ್ಮುದ್ದಿ ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಪರಿಣಾಮ ನಿದ್ರೆ ಮಂಪರಿನಲ್ಲಿದ್ದ 18 ತಿಂಗಳ ಅವಳಿ ಮಕ್ಕಳಾದ ಅಮೂಲ್ಯ ಹಾಗೂ ಅನುಶ್ರೀ ಮತ್ತು ಮಕ್ಕಳ ಅತ್ತೆ ಚನ್ನಮ್ಮ ದೊಡ್ಡಬಸಪ್ಪ ಹರಕುಣಿ (40) ಸ್ಥಳದಲ್ಲೇ ಮೃತಪಟ್ಟಿದ್ದರು.
ಮನೆಯ ಮಾಲೀಕ ಮುತ್ತಪ್ಪ ದೊಡ್ಡಬಸಪ್ಪ ಹರಕುಣಿ ಅವರ ಪತ್ನಿ ಸುನಿತಾ ಮುತ್ತಪ್ಪ ಹರಕುಣಿ ಹಾಗೂ ಮುತ್ತಪ್ಪನ ತಾಯಿ ಯಲ್ಲಮ್ಮ ದೊಡ್ಡಬಸಪ್ಪ ಹರಕುಣಿ ಗಾಯಗೊಂಡಿದ್ದರು. ಮುತ್ತಪ್ಪ ಹಾಗೂ ಸುನಿತಾ ಸವಣೂರ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಯಲ್ಲಮ್ಮರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಅಸುನೀಗಿದ್ದಾರೆ. ಈ ಕುರಿತು ಹುಲಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪಿಎಸ್‌ಐ ಪರಶುರಾಮ ಕಟ್ಟಿಮನಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ನಾಲ್ಕು ಭಾಗ ಮಾಡಿಕೊಂಡಿದ್ದರು
ಮೇಲ್ಮುದ್ದಿ ಮಣ್ಣಿನ ಹಳೇ ಮನೆಯನ್ನು ನಾಲ್ಕು ಭಾಗಗಳನ್ನಾಗಿ ಮಾಡಲಾಗಿತ್ತು. ಒಂದೆರೆಡು ಭಾಗದ ಮನೆಯನ್ನು ಸಹೋದರರು ಕಟ್ಟಿಸಿಕೊಳ್ಳುತ್ತಿದ್ದರು. ಮುತ್ತಪ್ಪ ಹಣಕಾಸಿನ ಸಮಸ್ಯೆಯಿಂದ ಮುಂದಿನ ದಿನಗಳಲ್ಲಿ ಕಟ್ಟಿಸಿಕೊಳ್ಳಲು ಕೈಬಿಟ್ಟಿದ್ದರು. ಸೋರುವ ಮೇಲ್ಛಾವಣಿಗೆ ತಾಡಪತ್ರಿ ಕಟ್ಟಿ ಅಲ್ಲೇ ವಾಸವಾಗಿದ್ದರು. ಸತತವಾಗಿ ಮಳೆ ಸುರಿದ ಪರಿಣಾಮ ಮೇಲ್ಛಾವಣಿ ಕುಸಿದು ಬಿದ್ದು ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.