

ಹಾವೇರಿ: ಸವಣೂರ ತಾಲೂಕಿನ ಕಳಸೂರ ಗ್ರಾಮದ ಬಳಿ ವರದಾ ನದಿಗೆ ಪ್ರತ್ಯೇಕ ಸೇತುವೆ ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ಕಳಸೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಸ್ಥರ ಒತ್ತಾಯದ ಮೇರೆಗೆ ಸ್ಥಳಕ್ಕೆ ಆಗಮಿಸಿ, ಬಾಂದಾರವನ್ನು ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಪರಿಶೀಲಿಸಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.
ಕಳಸೂರ ಬಳಿ ವರದಾ ನದಿಗೆ ಈ ಹಿಂದೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದ್ದು, ಇದು ಮಳೆಗಾಲದ ಸಂದರ್ಭದಲ್ಲಿ ಹಲವು ದಿನಗಳ ಕಾಲ ತುಂಬಿ ಹರಿಯುವ ಕಾರಣ ಸಂಪರ್ಕ ಬಂದ್ ಆಗುತ್ತದೆ. ಆ ಸಂದರ್ಭದಲ್ಲಿ ಹತ್ತಾರು ಕಿಮೀ ಸುತ್ತು ಹಾಕಿ ಹಾವೇರಿಗೆ ಬರಬೇಕಾಗುತ್ತದೆ.
ಕಳಸೂರ, ಮಂಟಗಣಿ, ಕೋಳೂರ, ಸೇರಿದಂತೆ ಹಲವು ಹಳ್ಳಿಗಳ ಜನರು ಈ ಮಾರ್ಗದ ಮೂಲಕ ಹಾವೇರಿ ಸಂಪರ್ಕ ಹೊಂದಿದ್ದಾರೆ. ಈ ಮಾರ್ಗದ ಮೂಲಕವೇ ಜಿಲ್ಲಾಧಿಕಾರಿ ಕಚೇರಿಗೆ ಹೋಗುತ್ತಾರೆ. ಮಳೆಗಾಲದ ಪ್ರವಾಹದ ವೇಳೆ ತೀವ್ರ ತೊಂದರೆ ಉಂಟಾಗುತ್ತಿದೆ. ಹಾಗಾಗಿ, ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡುವ ಮೂಲಕ ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಕಳಸೂರ ಗ್ರಾಪಂ ಅಧ್ಯಕ್ಷೆ ಪವಿತ್ರಾ ಮಂಟಗಣಿ, ಉಪಾಧ್ಯಕ್ಷೆ ಶ್ವೇತಾ ಬಳ್ಳಾರಿ, ಗ್ರಾಪಂ ಸದಸ್ಯರಾದ ಪುಟ್ಟಪ್ಪ ಮರಗಿ, ಸಾವಕ್ಕ ಜಾಗಟಿ, ಲೀಲಾವತಿ ಕಮ್ಮಾರ, ಶ್ರೀಧರ ದೊಡ್ಡಮನಿ, ಕಮಲಾ ಹೊಸಮನಿ, ಪಿಡಿಒ, ಗ್ರಾಮಸ್ಥರು ಇದ್ದರು.