ಮಲೆನಾಡಲ್ಲಿ ಮಳೆ, ವರದೆಗೆ ಜೀವಕಳೆ; ತುಂಬಿ ಹರಿಯುತ್ತಿದೆ ಕಳಸೂರ ಸೇತುವೆ; ಹತ್ತಾರು ಹಳ್ಳಿಗಳ ಸಂಪರ್ಕ ಕಡಿತ

17 HVR 4 A
Published on

ಹಾವೇರಿ/ ಸವಣೂರ: ಜಿಲ್ಲೆಯಲ್ಲಿ ಅಷ್ಟೇನು ಮಳೆ ಆಗದಿದ್ದರೂ ಮಲೆನಾಡು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ, ವರದಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಜೀವಕಳೆ ಬಂದಿದೆ. ಸವಣೂರ ತಾಲೂಕಿನ ಕಳಸೂರ ಬ್ರಿಜ್ಡ್ ಕಂ ಬ್ಯಾರೇಜ್ ಮುಳುಗಡೆಯಾಗಿದ್ದು, ಇದರಿಂದ ಈ ಭಾಗದ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸವಣೂರ ತಾಲೂಕು ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಜನರಿಗೆ ಹಾವೇರಿ ನಗರ ಹತ್ತಿರವಾಗುತ್ತದೆ. ಹಾಗಾಗಿ, ಹತ್ತಿಮತ್ತೂರ, ಕಸಳೂರ, ಕಲಕೋಟಿ, ಮಂಟಗಣಿ, ನದಿನೀರಲಗಿ, ಡೊಂಬರಮತ್ತೂರ, ಮೇಲ್ಮುರಿ, ಕಡಕೋಳ, ಹೂವಿನಶಿಗ್ಲಿ, ಮತ್ತಿತರ ಗ್ರಾಮಗಳ ನೂರಾರು ಜನ ನಿತ್ಯವೂ ಈ ಬ್ಯಾರೇಜ್ ಮೂಲಕ ಹಾವೇರಿಗೆ ಬಂದು ಹೋಗುತ್ತಾರೆ. ಬ್ಯಾರೇಜ್ ತುಂಬಿದ್ದರಿಂದ ಸಂಚಾರ ಸ್ಥಗಿತಗೊಂಡಿದ್ದು, ಜನ ಪರದಾಡುವಂತಾಗಿದೆ.
ಸೇತುವೆ ನಿರ್ಮಾಣಕ್ಕೆ ಆಗ್ರಹ
ಮಳೆಗಾಲದಲ್ಲಿ ಬ್ಯಾರೇಜ್ ತುಂಬಿ ನೀರು ಹರಿಯುವ ಕಾರಣ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಹಾಗಾಗಿ, ಈ ಭಾಗದ ಜನ ಸುಮಾರು 25 ಕಿಮೀ ಸುತ್ತು ಹಾಕಿ ಬರಬೇಕಾಗಿದೆ. ಹಾಗಾಗಿ, ವರದಾ ನದಿಗೆ ಕಳಸೂರ ಬಳಿ ಸೇತುವೆ ನಿರ್ಮಾಣ ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ಎಚ್ಚರಿಕೆ ಅಗತ್ಯ
ಬ್ರಿಜ್ ಮೇಲಿನಿಂದ ನೀರು ಹರಿಯುತ್ತಿದ್ದರೂ ಕೆಲವರು ಅಪಾಯ ಲೆಕ್ಕಿಸದೇ ವಾಹನವನ್ನು ಓಡಿಸುತ್ತಿದ್ದಾರೆ. ಸ್ಥಳೀಯರು ತಡೆಯುತ್ತಿದ್ದರೂ ನೀರಿನ ಸೆಳೆತದ ಮಧ್ಯೆಯೇ ಬೈಕ್, ಜೀಪ್ ಇತ್ಯಾದಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ತಾಲೂಕು ಆಡಳಿತ ಬ್ರೇಕ್ ಹಾಕಬೇಕಿದೆ.
ಗೋಡೆ ಬಿದ್ದು ಗಾಯ
ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದು, ಮಂಗಳವಾರ, ಬುಧವಾರ ನಿರಂತರವಾಗಿ ಜಿಟಿಜಿಟಿ ಮಳೆಯಾಗಿದೆ. ಇದರಿಂದ ರಟ್ಟೀಹಳ್ಳಿ ತಾಲೂಕಿನ ಮೇದೂರು ಗ್ರಾಮದ ರೇಶ್ಮಾ ಅಲಿಸಾಬ್ ಎಂಬವರ ಮನೆ ಭಾಗಶಃ ಕುಸಿದಿದೆ. ಹಾನಗಲ್ಲ ತಾಲೂಕಿನ ಕೆಲವರಕೊಪ್ಪ ಗ್ರಾಮದ ಮಾರುತಿ ಮೂಲಂಗಿ ಎಂಬುವರ ಮನೆ ಗೋಡೆ ಕುಸಿದು ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net