ಹಾವೇರಿ: ಸವಣೂರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಾಲ್ಕು ತಿಂಗಳ ಗಂಡು ಮಗು ಹೊತ್ತುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಹಿಳೆಯಿಂದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡ ಮಗುವನ್ನು ರಕ್ಷಿಸಿದೆ.
ಮಗುವಿನೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮಗುವನ್ನು ವಶಕ್ಕೆ ಪಡೆದು ಸ್ಪಂದನಾ ದತ್ತು ಕೇಂದ್ರಕ್ಕೆ ದಾಖಲಿಸಿದ್ದಾರೆ.
ಮಗುವಿನ ಗುರುತಿನ ಬಗ್ಗೆ ಮಹಿಳೆಯನ್ನು ವಿಚಾರಿಸಿದಾಗ ಮಗುವಿನ ಯಾವುದೇ ಮೂಲ ದಾಖಲೆಗಳನ್ನು ಆಕೆ ನೀಡಿಲ್ಲ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರಾಗಲು ತಿಳಿಸಿದರೂ ಈವರೆಗೆ ಹಾಜರಾಗಿಲ್ಲ. ಮಹಿಳೆ ಮೇಲೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಕರಿಗೆ 60 ದಿನ ಅವಕಾಶ
ಮಾನವಿಯತೆಯ ಆಧಾರದ ಮೇಲೆ ಮಗುವಿನ ಜೈವಿಕ ಪಾಲಕರಿಗೆ ಮಗುವನ್ನು ಮರಳಿ ಪಡೆಯಲು ಕೊನೆಯ ಅವಕಾಶವಿದೆ. ಈ ಪ್ರಕಟಣೆಯ 60 ದಿನದೊಳಗೆ ಸೂಕ್ತ ದಾಖಲಾತಿಯೊಂದಿಗೆ ಸ್ಪಂದನಾ ವಿಶೇಷ ದತ್ತು ಸಂಸ್ಥೆ ಹಾವೇರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾವೇರಿ ಕಚೇರಿಗೆ ಹಾಜರಾಗಬೇಕು. ಇಲ್ಲದಿದ್ದಲ್ಲಿ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಪರಿತ್ಯಕ್ತ ಮಗುವೆಂದು ಪರಿಗಣಿಸಿ, ಕಾನೂನಿನ್ವಯ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು. ಹೆಚ್ಚಿನ ಮಾಹಿತಿಗೆ ಇ-ಮೇಲ್ ಛ್ಚಟ್ಠಛ್ಟಿಜಿಃಜಞಜ್ಝಿ.್ಚಟಞ ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ಘಟಕ ತಿಳಿಸಿದೆ.