ಸರ್ಜಿ ರೇಣುಕಾ ದೇವಧರ ಹಾಸ್ಪಿಟಲ್ ಲೋಕಾರ್ಪಣೆ; ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಚಿಕಿತ್ಸೆ ನಮ್ಮ ಗುರಿ; ಡಾ.ಧನಂಜಯ ಸರ್ಜಿ ಹೇಳಿಕೆ

14 HVR 3 A
Published on

ಹಾವೇರಿ: ಇಲ್ಲಿನ ಶಿವಬಸವ ನಗರದಲ್ಲಿ ಸೋಮವಾರ ಸರ್ಜಿ ಆಸ್ಪತ್ರೆಗಳ ಸಮೂಹದ ವತಿಯಿಂದ ‘ಸರ್ಜಿ ರೇಣುಕಾ ದೇವಧರ ಹಾಸ್ಪಿಟಲ್’ ಲೋಕಾರ್ಪಣೆಗೊಂಡಿದೆ. ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶ ಮತ್ತು ಗುರಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸರ್ಜಿ ಸಮೂಹ ಆಸ್ಪತ್ರೆಗಳ ಚೇರ್ಮನ್ ಡಾ.ಧನಂಜಯ ಸರ್ಜಿ ಹೇಳಿದರು.
ಸರ್ಜಿ ರೇಣುಕಾ ದೇವಧರ ಹಾಸ್ಪಿಟಲ್ ಉದ್ಘಾಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹ ಕೈಗೆಟುಕುವ ದರೊಂದಿಗೆ ಉತ್ಕೃಷ್ಟ ಗುಣಮಟ್ಟದ ಸೇವೆ ನೀಡುತ್ತಿದೆ. ಇದೀಗ ಹಾವೇರಿ ಭಾಗದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾವೇರಿಯಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಪ್ರತಿಷ್ಠಿತ ದೇವಧರ ಆಸ್ಪತ್ರೆಯು ಹೊಸದಾಗಿ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯಾಗಿ ಆಧುನಿಕ ತಂತ್ರಜ್ಞಾನ ಮತ್ತು ಸುಸಜ್ಜಿತ ಸೌಲಭ್ಯಗಳೊಂದಿಗೆ ಶುಭಾರಂಭಗೊಂಡಿದೆ. ಉತ್ತಮ ಆರೋಗ್ಯ ಸೇವೆ ನೀಡಲು ನಾವು ಬದ್ದರಾಗಿದ್ದೇವೆ. ಹಾವೇರಿಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಧು ಕೆ.ಆರ್. ಮಾತನಾಡಿ, ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಅತ್ಯಾಧುನಿಕ ಮತ್ತು ಸುಸಜ್ಜಿತ 100 ಹಾಸಿಗೆಗಳ ಸೌಲಭ್ಯ ಹೊಂದಿದೆ. ಎಲುಬು ಮತ್ತು ಕೀಲು ವಿಭಾಗ, ಸಾಮಾನ್ಯ ರೋಗ ವಿಭಾಗ, ಮಕ್ಕಳ ಹಾಗೂ ನವಜಾತ ಶಿಶುಗಳ ವಿಭಾಗ 24/7 ಮಕ್ಕಳ ಐ.ಸಿ.ಯು ಹಾಗೂ ಎಂ.ಐ.ಸಿ.ಯು ತುರ್ತು ಚಿಕಿತ್ಸೆ, ಎಕ್ಸ್ ರೇ, ಲ್ಯಾಬೋರೋಟರಿ ಸೌಲಭ್ಯ ಇಲ್ಲಿ ಲಭ್ಯ. ಮುಂದಿನ ದಿನಗಳಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಹೃದಯ ರೋಗ ವಿಭಾಗ, ನ್ಯೂರೋ ಸರ್ಜರಿ, ಕ್ಯಾತ್ ಲ್ಯಾಬ್, ಜನರಲ್ ಸರ್ಜರಿ, ಇತರ ಸೇವೆಗಳು ಪ್ರಾರಂಭಗೊಳ್ಳಲಿವೆ ಎಂದರು.
ಡಾ.ಜಿ.ಜೆ.ದೇವಧರ ಅವರ ಪತ್ನಿ ರೊ.ಮಾಧುರಿ ದೇವಧರ, ಪುತ್ರ ಡಾ.ಸಂಜಯ ದೇವಧರ, ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿ ನಮಿತಾ ಸರ್ಜಿ, ಸರ್ಜಿ ಆಸ್ಪತ್ರೆಗಳ ಸಮೂಹದ ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ, ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯ ಡಾ.ನವೀನ, ಡಾ.ಸಚಿನ, ಡಾ.ರಾಘವಾಂಕ, ಆಸ್ಪತ್ರೆ ಸಿಬ್ಬಂದಿ, ಇತರರು ಪಾಲ್ಗೊಂಡಿದ್ದರು.

ಕೋಟ್:
ಡಾ.ಜಿ.ಜೆ.ದೇವಧರ ಅವರು ಹಾವೇರಿ, ಸುತ್ತಮುತ್ತಲಿನ ಜನರಿಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಕೊಡುವ ಮೂಲಕ ಜನಾನುರಾಗಿಯಾಗಿದ್ದರು. ಅವರ ಹಾದಿಯಲ್ಲೇ ಈ ಆಸ್ಪತ್ರೆಯೂ ಸಾಗಲಿದೆ. ಹಾವೇರಿ ಜನ ಹೆಚ್ಚಿನ ಚಿಕಿತ್ಸೆಗೆಂದು ದಾವಣಗೆರೆ, ಹುಬ್ಬಳ್ಳಿ, ಇತರ ಊರುಗಳಿಗೆ ಅಲೆಯುವುದನ್ನು ಈ ಆಸ್ಪತ್ರೆ ತಪ್ಪಿಸಲಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು.
> ಡಾ.ಮಧು ಕೆ.ಆರ್., ವೈದ್ಯಕೀಯ ನಿರ್ದೇಶಕ, ಸರ್ಜಿ ರೇಣುಕಾ ದೇವಧರ ಹಾಸ್ಪಿಟಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net