ಸಂಜೀವಿನಿ ಲೈಂಗಿಕ ಅಲ್ಪಸಂಖ್ಯಾತರ ಸೇವಾ ಸಂಸ್ಥೆಯಿಂದ ಅಕ್ಷತಾ ಕೆ.ಸಿ. ಸದಸ್ಯತ್ವ ರದ್ದು; ನೂತನ ಜಿಲ್ಲಾಧ್ಯಕ್ಷೆ ತನುಶ್ರೀ ಡಿ. ಧಾರವಾಡ ಹೇಳಿಕೆ

30 Tanushri Dharwad
Published on

ಹಾವೇರಿ: ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಪೌರ ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ತೃತೀಯ ಲಿಂಗಿ ಅಕ್ಷತಾ ಕೆ.ಸಿ. ಅವರನ್ನು ಸಂಜೀವಿನಿ ಲೈಂಗಿಕ ಅಲ್ಪಸಂಖ್ಯಾತರ ಸೇವಾ ಸಂಸ್ಥೆಯ ಸದಸ್ಯತ್ವ ರದ್ದುಗೊಳಿಸಿ, ಅವರನ್ನು ಜಿಲ್ಲಾಧ್ಯಕ್ಷೆ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಸಂಸ್ಥೆಯ ನೂತನ ಜಿಲ್ಲಾಧ್ಯಕ್ಷೆ ತನುಶ್ರೀ ಯು. ಧಾರವಾಡ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧಿಯಾಗಿ, ನ್ಯಾಯಾಂಗ ಬಂಧನದಲ್ಲಿರುವ ತೃತೀಯ ಲಿಂಗಿ ಅಕ್ಷತಾ ಕೆ.ಸಿ. ಈ ಮೊದಲು ಈ ಸಂಸ್ಥೆಯ ಜಿಲ್ಲಾಧ್ಯಕ್ಷೆ ಆಗಿದ್ದರು. ಈ ಪ್ರಕರಣದಿಂದ ನಮ್ಮ ಸಮುದಾಯಕ್ಕೆ ನೋವಾಗಿದೆ. ಸಂಸ್ಥೆಯ ಜಿಲ್ಲಾ ಕಚೇರಿ ಖಾಲಿ ಮಾಡಿ ಎನ್ನುತ್ತಿದ್ದಾರೆ. ನಮ್ಮ ಸದಸ್ಯರು ಭಯಭೀತರಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಬೇಕಾದವರೇ ಈ ರೀತಿ ಮಾಡಿರುವುದನ್ನು ನಮ್ಮ ಸಂಸ್ಥೆ ಖಂಡಿಸುತ್ತದೆ. ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ, ಅಕ್ಷತಾ ಅವರ ಸದಸ್ಯತ್ವ ರದ್ದುಗೊಳಿಸಿ, ಜಿಲ್ಲಾಧ್ಯಕ್ಷೆ ಸ್ಥಾನದಿಂದ ಕೈಬಿಡಲಾಗಿದೆ. ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಲಿಂಗತ್ವ ಅಲ್ಪಸಂಖ್ಯಾತರು ಶೋಷಿತರಲ್ಲಿ ಶೋಷಿತರು. ಸಮಾಜ ಹಾಗೂ ಕುಟುಂಬದಿಂದಲೂ ದೂರ ಆಗಿರುವವರು. ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮುದಾಯದವರನ್ನು ದೂರದೇ ತಪ್ಪು ಮಾಡಿದವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಿ. ನಮ್ಮ ಸುಮದಾಯವರ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ 15 ವರ್ಷಗಳಿಂದ ಸಂಸ್ಥೆ ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಆರೋಗ್ಯ, ಶಿಕ್ಷಣ, ವಸತಿ, ಮೂಲಭೂತ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ 2,300 ಸದಸ್ಯರು ಇದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷೆ ಲಕ್ಷ್ಮೀ ಎಸ್. ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಸಾಧಿಕ್ ಎ.ಜಿ., ಅಪ್ಪು ಎಚ್.ಎಂ., ಮಾಲಾ ಎಚ್. ಬಾರ್ಕಿ, ಅರುಣ ಡಿ., ಸಯ್ಯದ್ ಎಸ್., ಚಂದ್ರು ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net