

ಕೇಶವಮೂರ್ತಿ ವಿ.ಬಿ. ಹಾವೇರಿ
ತಾಲೂಕಿನ ಸಂಗೂರ ಗ್ರಾಮದ ಜಿ.ಎಂ.ಶುಗರ್ ಆ್ಯಂಡ್ ಎನರ್ಜಿ ಲಿಮಿಟೆಡ್ ಸಕ್ಕರೆ ಕಾರ್ಖಾನೆಯನ್ನು ವಿಜಯನಗರ ಶುಗರ್ಸ್ ಲಿಮಿಟೆಡ್ ಫ್ಯಾಕ್ಟರಿಗೆ ಉಪ ಗುತ್ತಿಗೆ ಕೊಟ್ಟಿರುವ ಕುರಿತು ಸರ್ಕಾರ ಇಲಾಖೆಯೊಂದರ ಅಧಿಕೃತ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಈ ಪತ್ರ ಇದೀಗ ಈ ಭಾಗದ ಕಬ್ಬು ಬೆಳೆಗಾರರಲ್ಲಿ ಭಾರಿ ಗೊಂದಲ ಮತ್ತು ಆತಂಕ ಸೃಷ್ಟಿಸಿದೆ.
ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ(ಕೆಎಸ್‌ಎಸ್‌ಕೆ) ಸಂಗೂರು, ಈ ಕಾರ್ಖಾನೆಯನ್ನು ಮೆ.ವಿಜಯನಗರ ಶುಗರ್ಸ್ ಲಿ. ಇವರಿಗೆ ಗುತ್ತಿಗೆ ನೀಡಲಾಗಿದೆ. ಸದರಿ ಗುತ್ತಿಗೆ ಒಪ್ಪಂದದ ಷರತ್ತು ಮತ್ತು ನಿಬಂಧನೆಗಳನ್ನು ಅನುಪಾಲನೆ ಮಾಡಿರುವ ಬಗ್ಗೆ ಮೆ.ಜಿ.ಎಂ.ಶುಗರ್ ಆ್ಯಂಡ್ ಎನರ್ಜಿ ಲಿ. ಸಂಗೂರು ಇವರಿಂದ ವರದಿ ಪಡೆದು ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿ ಶಾಂತಾರಾಮ ಅವರು ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರಿಗೆ ಪತ್ರದ ಮೂಲಕ ನಿರ್ದೇಶಿಸಿದ್ದಾರೆ. ಈ ಪತ್ರದ ಪ್ರತಿಯನ್ನು ಜಿ.ಎಂ.ಶುಗರ್ಸ್ ಚೇರ್ಮನ್ ಹಾಗೂ ಕೆಎಸ್‌ಎಸ್‌ಕೆ ಅಧ್ಯಕ್ಷರಿಗೂ ರವಾನಿಸಿದ್ದಾರೆ.
30 ವರ್ಷಗಳ ಕಾಲ ಲೀಜ್‌ಗೆ ಪಡೆದಿರುವ ಜಿ.ಎಂ.ಶುಗರ್ಸ್ ಫ್ಯಾಕ್ಟರಿಯ ಅವಧಿ ಈವರೆಗೆ 14 ವರ್ಷ ಮುಕ್ತಾಯವಾಗಿದ್ದು, ಇನ್ನೂ 16 ವರ್ಷ ಬಾಕಿ ಇದೆ. ಲೀಸ್ ಪಡೆದವರು ಯಾರಿಗೂ ಸಬ್ ಲೀಸ್ ಕೊಡಬಾರದು ಎಂಬ ಷರತ್ತುಗಳಿವೆ. ಆದರೂ, ಯಾರ ಗಮನಕ್ಕೂ ಬಾರದೇ ಏಕಾಏಕಿ ಒಪ್ಪಂದ, ಕರಾರು ಉಲ್ಲಂಘಿಸಿ ಜಿ.ಎಂ.ಶುಗರ್ಸ್ ಫ್ಯಾಕ್ಟರಿಯವರು ಹೇಗೆ ಬೇರೆಯವರಿಗೆ ಗುತ್ತಿಗೆ ನೀಡಿದ್ದಾರೆ ಎಂದು ಕಬ್ಬು ಬೆಳೆಗಾರರು ಆತಂಕಗೊಂಡಿದ್ದಾರೆ. 23ರಂದು ವಾರ್ಷಿಕ ಸಭೆ
ಜಿ.ಎಂ.ಶುಗರ್ಸ್‌ನವರು ಸಬ್ ಲೀಜ್ ಕೊಟ್ಟಿರುವುದಕ್ಕೆ ರೈತರ ಸಂಪೂರ್ಣ ವಿರೋಧವಿದೆ. ಸೆ.23ರಂದು ಸಂಘದ ವಾರ್ಷಿಕ ಮಹಾಸಭೆ ಇದೆ. ಸಭೆಯಲ್ಲಿ ಸಬ್‌ಲೀಸ್ ನಡೆ ಖಂಡಿಸಿ ಠರಾವು ಮಾಡಲಾಗುವುದು ಎಂದು ಸಂಘದ ಮೂಲಗಳು ತಿಳಿಸಿವೆ.
ಪ್ರಸ್ತಾವನೆಯೇ ಇಲ್ಲ
ಈ ಪತ್ರದಿಂದ ನಮ್ಮಲ್ಲೂ ಗೊಂದಲ ಉಂಟಾಗಿದೆ. ಜಿಎಂ ಶುಗರ್ಸ್ ಫ್ಯಾಕ್ಟರಿಯನ್ನು ವಿಜಯನಗರ ಶುಗರ್ಸ್‌ಗಾಗಲೀ ಯಾವುದೇ ಫ್ಯಾಕ್ಟರಿಗಾಗಲೀ ಸಬ್ ಲೀಸ್ ಕೊಡುವ ಪ್ರಸ್ತಾವನೆಯೇ ನಮ್ಮಲ್ಲಿ ಇಲ್ಲ. ಈ ಕುರಿತು ಪರಿಶೀಲಿಸಲಾಗುತ್ತಿದೆ ಎನ್ನುತ್ತಾರೆ ಜಿ.ಎಂ.ಶುಗರ್ಸ್ ಶುಗರ್ ಕೇನ್ ಅಭಿವೃದ್ಧಿ ಅಧಿಕಾರಿ ರಾಮಚಂದ್ರಪ್ಪ.
ಕೋಟ್:
ಸಂಗೂರಿನ ಜಿ.ಎಂ.ಶುಗರ್ ಸಕ್ಕರೆ ಕಾರ್ಖಾನೆಯನ್ನು ವಿಜಯನಗರ ಶುಗರ್ಸ್ ಲಿಮಿಟೆಡ್ ಫ್ಯಾಕ್ಟರಿಗೆ ಉಪ ಗುತ್ತಿಗೆ ಕೊಡಲು ಅವಕಾಶವೇ ಇಲ್ಲ. ಈ ಕುರಿತ ಪತ್ರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಶಿವಾನಂದ ಪಾಟೀಲ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ
ಕೋಟ್:
ಬೇರೆಯವರಿಗೆ ಸಬ್ ಲೀಸ್ ಕೊಟ್ಟಿರುವ ಕುರಿತು ಬುಧವಾರ ಸಕ್ಕರೆ ಆಯುಕ್ತರ ಕಚೇರಿಯಿಂದ ಅಧಿಕೃತ ಪತ್ರ ಬಂದಿದೆ. ಈ ಕುರಿತು ಈವರೆಗೆ ಯಾವುದೇ ವಿಚಾರವೂ ನಮ್ಮ ಗಮನಕ್ಕೆ ಬಂದಿಲ್ಲ. ಸಬ್ ಲೀಸ್ ಕೊಡಲು ಯಾವುದೇ ಅವಕಾಶವಿಲ್ಲ. ಇದನ್ನು ಮೀರಿ ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಕ್ಕರೆ ಆಯುಕ್ತರು ಹಾಗೂ ಜಿಎಂ ಶುಗರ್ಸ್‌ನವರಿಗೂ ಪತ್ರ ಬರೆದಿದ್ದೇವೆ.
- ಮಂಜುನಾಥ ಅಸುಂಡಿ, ಅಧ್ಯಕ್ಷ, ಕೆಎಸ್‌ಎಸ್‌ಕೆ, ಸಂಗೂರ
ಕೋಟ್:
ಲೀಸ್ ಅಗ್ರಿಮೆಂಟ್ ಪ್ರಕಾರ ಜಿಎಂ ಶುಗರ್ಸ್‌ನವರೇ ನಡೆಸಬೇಕು. ಸಬ್‌ಲೀಸ್ ಕೊಡಲು ಅವಕಾಶವಿಲ್ಲ. ಹೀಗಿದ್ದರೂ, ಏಕಾಏಕಿ ಗ್ಯೌವಾಗಿ ವಿಜಯನಗರ ಶುಗರ್ಸ್‌ಗೆ ಸಬ್ ಲೀಸ್ ಯಾಕೆ ಕೊಡಲಾಗುತ್ತಿದೆ. ಇದಕ್ಕೆ ಕಬ್ಬು ಬೆಳೆಗಾರರ ಸಂಪೂರ್ಣ ವಿರೋಧವಿದೆ. ಸಬ್‌ಲೀಸ್‌ಗೆ ನಾವು ಅವಕಾಶ ಕೊಡುವುದಿಲ್ಲ. ಈ ಆದೇಶವನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು.
- ಅಶೋಕರಡ್ಡಿ ಮರ್ಚರಡ್ಡೇರ, ಅಧ್ಯಕ್ಷ, ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ, ಬೆಳವಗಿ