ಗುತ್ತಿಗೆ ಬದಲಾವಣೆ ಪತ್ರ ಹಿಂಪಡೆದ ಸರ್ಕಾರ

Sangur lease leatter
Published on

ಹಾವೇರಿ: ತಾಲೂಕಿನ ಸಂಗೂರು ಗ್ರಾಮದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ (ಕೆಎಸ್‌ಎಸ್‌ಕೆ)ಯನ್ನು ಮೆ.ವಿಜಯನಗರ ಶುಗರ್ಸ್‌ಗೆ ಗುತ್ತಿಗೆ ನೀಡಿರುವುದಾಗಿ ಸೆ.11ರಂದು ಅಧಿಕೃತ ಪತ್ರ ಬರದಿದ್ದ ಸರ್ಕಾರ ಸೆ.13ರಂದು ಈ ಪತ್ರವನ್ನು ಹಿಂಪಡೆದಿದೆ. ರೈತರ ವಿರೋಧದ ಕುರಿತು ‘ವಿಜಯವಾಣಿ’ ವರದಿ ಪ್ರಕಟಿಸುತ್ತಿದ್ದಂತೆ ‘ಕಣ್ ತಪ್ಪಿನಿಂದ ಆಗಿದೆ’ ಎಂದು ಸಮಜಾಯಿಷಿ ನೀಡಿದೆ.
ಕೆಎಸ್‌ಎಸ್‌ಕೆಯನ್ನು ಈಗಾಗಲೇ ಜಿ.ಎಂ.ಶುಗರ್ಸ್‌ನವರಿಗೆ 30 ವರ್ಷ ಲೀಸ್‌ಗೆ ಕೊಡಲಾಗಿದೆ. ಈಗಾಗಲೇ 16 ವರ್ಷ ಪೂರೈಸಿದ್ದು, ಇನ್ನೂ 14 ವರ್ಷ ಬಾಕಿ ಇದೆ. ಲೀಸ್ ಪಡೆದವರು ಸಬ್ ಲೀಸ್ ಕೊಡಲು ಅವಕಾಶವಿಲ್ಲ. ಹೀಗಿರುವಾಗ, ‘ಕೆಎಸ್‌ಎಸ್‌ಕೆ ಫ್ಯಾಕ್ಟರಿಯನ್ನು ಮೆ.ವಿಜಯನಗರ ಶುಗರ್ಸ್‌ಗೆ ಗುತ್ತಿಗೆ ನೀಡಲಾಗಿದೆ’ ಸದರಿ ಗುತ್ತಿಗೆ ಒಪ್ಪಂದ ಹಾಗೂ ಷರತ್ತುಗಳ ಅನುಪಾನೆ ಮಾಡಿರುವ ಕುರಿತು ಕೂಡಲೇ ವರದಿ ಸಲ್ಲಿಸುವಂತೆ ಕಬ್ಬು ಹಾಗೂ ಸಕ್ಕರೆ ಆಯುಕ್ತರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಾರಾಮ ಪತ್ರ ಬರೆದಿದ್ದರು. ಈ ಪತ್ರದಿಂದ ಕೆಎಸ್‌ಎಸ್‌ಕೆ ಹಾಗೂ ಸ್ಥಳೀಯ ಕಬ್ಬು ಬೆಳೆಗಾರರಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿತ್ತು.
ಈ ಕುರಿತು ‘ಸಂಗೂರ ಸಕ್ಕರೆ ಕಾರ್ಖಾನೆ ಉಪ ಗುತ್ತಿಗೆಗೆ ?’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಫೋಕಸ್ ಸ್ಟೋರಿ ಪ್ರಕಟಿಸಿತ್ತು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಕೂಡ ಅಧಿಕಾರಿಗಳಿಗೆ ಸೂಚಿಸಿದ್ದರು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿ ‘ಕಣ್ ತಪ್ಪಿನಿಂದಾಗಿ ತಪ್ಪಾಗಿ ನಮೂದಾಗಿದೆ. ಹಾಗಾಗಿ, ಆ ದಿನಾಂಕದಿಂದಲೇ ಪತ್ರವನ್ನು ಹಿಂಪಡೆಯಲಾಗಿದೆ’ ಎಂದು ಸೆ.13ರಂದು ಹೊಸ ಆದೇಶ ಹೊರಡಿಸಿದ್ದಾರೆ. ಇದರಿಂದ ಕಬ್ಬು ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ.

ರೈತರಲ್ಲಿ ಹಲವು ಅನುಮಾನ
ಸರ್ಕಾರದ ಅಧೀನ ಕಾರ್ಯದರ್ಶಿಯೊಬ್ಬರು ಬರೆದ ಅಧಿಕೃತ ಪತ್ರದಲ್ಲಿ ಇಂತಹ ಅಚಾತುರ್ಯ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಣ್ ತಪ್ಪಿನಿಂದ ಆಗಿದೆ. ಪತ್ರ ಹಿಂಪಡೆದಿದ್ದಾರೆ ಆದರೂ, ಒಂದು ಸಕ್ಕರೆ ಕಾರ್ಖಾನೆಯ ವಿಷಯವನ್ನು ಇಷ್ಟು ಹಗುರವಾಗಿ ತೆಗೆದುಕೊಂಡಿದ್ದು ಯಾಕೆ ? ಇದರ ಹಿಂದೆ ಬೇರೆ ಏನಾದರೂ ಆಲೋಚನೆಗಳು ಇವೆಯಾ ? ಎಂಬಿತ್ಯಾದಿ ಪ್ರಶ್ನೆಗಳು ರೈತ ಬಾಂಧವರಲ್ಲಿ ಕಾಡುತ್ತಿವೆ. ಮುಂದೆ ಇಂತಹ ಅಚಾತುರ್ಯಗಳು ಸಂಭವಿಸದಂತೆ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net