ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರ ಅಳವಡಿಸಿ; ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹ

Bhuvaneshwar Shidlapur 1
Published on

ಹಾವೇರಿ: ರಾಜ್ಯ ಸರ್ಕಾರದ ಆದೇಶದ ಅನ್ವಯ ಈ ಕೂಡಲೇ ತಾಲೂಕಿನ ಸಂಗೂರ ಗ್ರಾಮದ ಜಿಎಂ ಸಕ್ಕರೆ ಕಾರ್ಖಾನೆ ಎದುರು ಸರ್ಕಾರದಿಂದಲೇ ತೂಕದ ಯಂತ್ರ (ವೇ ಬ್ರಿಜ್) ಅಳವಡಿಸಬೇಕು. ಈ ಮೂಲಕ ತೂಕದಲ್ಲಿ ಆಗುವ ಮೋಸವನ್ನು ತಡೆಗಟ್ಟಬೇಕು ಎಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದ್ದಾರೆ.

ಪ್ರತಿ ಕಾರ್ಖಾನೆ ಎದುರು ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಈ ಕುರಿತು ಸಿಎಂ ಸೇರಿದಂತೆ ಸಕ್ಕರೆ ಸಚಿವ ಶಿವಾನಂದ ಪಾಟೀಲರೂ ಹಲವು ಬಾರಿ ಹೇಳಿದ್ದಾರೆ. ಆದರೂ ಈವರೆಗೆ ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರ ನಿರ್ಮಾಣವಾಗಿಲ್ಲ. ಜಿಲ್ಲಾಧಿಕಾರಿಯವರು ಸಚಿವರ ಗಮನಕ್ಕೆ ತಂದು ಕೂಡಲೇ ತೂಕದ ಯಂತ್ರ ಅಳವಡಿಸಬೇಕು.

ಈ ಭಾಗದ ರೈತರು ಬೆಳೆದ ಮೆಕ್ಕೆಜೋಳ ಹತ್ತಿ, ಭತ್ತ, ಕಬ್ಬು, ಹೂವು, ತರಕಾರಿಗಳನ್ನು ತೂಕ ಮಾಡಿಸಲು ಹಾವೇರಿಗೆ ಹೋಗಬೇಕಾಗಿದೆ. ಇದನ್ನು ತಪ್ಪಿಸಲು ಹಾವೇರಿ- ಹಾನಗಲ್ಲ ರಸ್ತೆಗೆ ಹೊಂದಿಕೊಂಡಿರುವ ಸಂಗೂರ ಗ್ರಾಮದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯ 185 ಎಕರೆ ಪ್ರದೇಶದಲ್ಲಿ ಸರ್ಕಾರ ವೇ ಬ್ರಿಜ್ ನಿರ್ಮಿಸಬೇಕು. ಇದರಿಂದ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಈ ಹಿಂದೆ 20 ಕೆಜಿಗೆ ಒಂದು ಕೆಜಿಯಂತೆ ವ್ಯಾಪಾರಸ್ಥರು ರೈತರಿಗೆ ಮೋಸ ಮಾಡಿದ್ದನ್ನು ರೈತರೇ ಹಿಡಿದು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿದ್ದೇವೆ. ಇನ್ನು ಮುಂದೆ ತೂಕದಲ್ಲಿ ಮೋಸ ಆಗದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಭುವನೇಶ್ವರ ಶಿಡ್ಲಾಪುರ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net