ಕೈ ಕಳೆದುಕೊಂಡರೂ ಸ್ವಾತಂತ್ರೃಕ್ಕಾಗಿ ಹೋರಾಡಿದ ಸಂಗೂರ ಕರಿಯಪ್ಪ; ಡಾ.ಎಫ್.ಟಿ ಹಳ್ಳಿಕೇರಿ ಅಭಿಪ್ರಾಯ

20 HVR 7
Published on

ಹಾವೇರಿ: ಸ್ವಾತಂತ್ರ್ಯ ಸಮರದಲ್ಲಿ ನಾಡಬಾಂಬ್ ತಯಾರಿಸುವಾಗ ಸ್ಪೋಟಗೊಂಡು ಬಲಗೈ ಮುಂಗೈ ಕಳೆದುಕೊಂಡರೂ ಆಂಗ್ಲರ ವಿರುದ್ಧ ಜೀವಮಾನವೆಲ್ಲ ಹೋರಾಡಿದ ಸಂಗೂರ ಕರಿಯಪ್ಪ ಅವರು ನಮ್ಮ ನಾಡಿನ ಮಹಾನ್ ಚೇತನ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಡೀನ್ ಡಾ.ಎಫ್.ಟಿ ಹಳ್ಳಿಕೇರಿ ಅಭಿಪ್ರಾಯಪಟ್ಟರು.

ನಗರದ ಡಾ.ಮಹದೇವ ಬಣಕಾರ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಭವನದಲ್ಲಿ ಸೋಮವಾರ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಟ್ರಸ್ಟ್‌ನಿಂದ ಪ್ರಕಟಿಸಿರುವ ‘ಸ್ವಾತಂತ್ರ್ಯ ಸಿಂಹ ಕರಿಯಪ್ಪ ಯರೇಶೀಮಿ’ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪ್ರಕಟಿಸಿದ ‘ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರ ಅನುಯಾಯಿಯಾಗಿದ್ದುಕೊಂಡು ಕರಿಯಪ್ಪ ಅವರು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ವಿರೋಚಿತವಾಗಿ ಹೋರಾಡಿದವರಲ್ಲಿ ಕರಿಯಪ್ಪ ಯರೇಶೀಮಿ ಹಾಗೂ ವೀರಮ್ಮ ಯರೇಶೀಮಿ ಅತ್ಯಂತ ಪ್ರಮುಖರು. ಇಂತಹ ಮಹಾನ್ ವ್ಯಕ್ತಿಗಳ ಜೀವನ ಗಾಥೆಯನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.

ಲೇಖಕ ಲಿಂಗದಹಳ್ಳಿ ಹಾಲಪ್ಪ ಮಾತನಾಡಿ, ಕರಿಯಪ್ಪ ಯರೇಶೀಮಿ ಅವರು ಅತ್ಯಂತ ಬಡತನದಲ್ಲಿಯೇ ಬಾಲ್ಯವನ್ನು ಕಳೆದರು. ಸಹೋದರರ ಸಹಕಾರದೊಂದಿಗೆ ಹಾಗೂ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮಕಿ ದೇಶ ಎಂದೂ ಮರೆಯದ ಮಹಾನ್ ಸ್ವಾತಂತ್ರ್ಯ ಸೇನಾನಿಯಾದರು ಎಂದರು.

ಮಹಾತ್ಮ ಗಾಂಧೀಜಿಯವರ ಆಣತಿಯಂತೆ ಗಾಂಧೀಜಿ-ಕಸ್ತೂರಬಾ ಅವರ ಸಾಕು ಮಗಳಾದ ದಲಿತ ಸಮುದಾಯದ ವೀರಮ್ಮ ಅವರನ್ನು ಅಂತರ್ಜಾತಿ ವಿವಾಹವಾದರು. ಬಹುದೊಡ್ಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೂ ಅಂತರ್ಜಾತಿ ವಿವಾಹವಾದ ಪರಿಣಾಮವಾಗಿ ಜಿಡ್ಡುಗಟ್ಟಿದ ಜಾತಿ ವ್ಯವಸ್ಥೆಯಲ್ಲಿ ಮೇಲ್ಜಾತಿಯವರಿಂದ ಸಾಕಷ್ಟು ನೋವು ಅವಮಾನಗಳನ್ನು ಅನುಭವಿಸಿದರು ಎಂದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸಂಗೂರ ಕರಿಯಪ್ಪ ಅವರ ಹೆಸರನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಸ್ಮಾರಕ ಟ್ರಸ್ಟ್ ಪುಸ್ತಕ ಪ್ರಕಟಣೆ ಮಾಡುವುದು ಸೇರಿದಂತೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ಅಭಿಮಾನದ ಸಂಗತಿ. ಟ್ರಸ್ಟ್ ಪದಾಧಿಕಾರಿಗಳ ಆಶಯದಂತೆ ಹಾವೇರಿ ನಗರದಲ್ಲಿರುವ ಜಿಲ್ಲಾ ಕೆಂದ್ರ ಬಸ್ ನಿಲ್ದಾಣಕ್ಕೆ ಸಂಗೂರ ಕರಿಯಪ್ಪ ವೀರಮ್ಮ ದಂಪತಿಗಳ ಹೆಸರಿನಲ್ಲಿ ನಾಮಕರಣ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆದಿವೆ ಎಂದರು.

ಆರಂಭದಲ್ಲಿ ಕಾಳಿದಾಸ ಪ್ರೌಢಶಾಲೆಯ ವಿದ್ಯಾರ್ಥಿನಿಯರು ದೇಶಭಕ್ತಿಗೀತೆ ಹಾಡಿದರು. ಎಫ್.ಎನ್.ಗೊರವರ ಸ್ವಾತಂತ್ರ್ಯ ಸಮರದ ಲಾವಣಿ ಹಾಡಿದರು. ಟ್ರಸ್ಟ್ ಸದಸ್ಯ ಬಸವರಾಜ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಟ್ರಸ್ಟ್ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸಾಹಿತಿಗಳಾದ ಸತೀಶ ಕುಲಕರ್ಣಿ, ಸಂಕಮ್ಮ ಸಂಕಣ್ಣನವರ, ಡಾ.ಮೋಹನ ಹಂಡೆ, ಅಶೋಕ ನಡಕಟ್ಟಿನ, ಅಬ್ದುಲ್ ಹುಬ್ಬಳ್ಳಿ, ಇತರರು ಉಪಸ್ಥಿತರಿದ್ದರು.

ಶಶಿಕಲಾ ಕಣಿವೇರ ಸ್ವಾಗತಿಸಿದರು. ಶ್ರೀನಿವಾಸ ಯರೇಶೀಮಿ ವಂದಿಸಿದರು. ಮಂಜುನಾಥ ಗಾಜಿ ನಿರೂಪಿಸಿದರು.

ಹಲವರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಡಾ.ಎಫ್.ಟಿ ಹಳ್ಳಿಕೇರಿ, ಡಾ.ಲಿಂಗದಹಳ್ಳಿ ಹಾಲಪ್ಪ, ಅಮೆರಿಕ ನಿವಾಸಿ ಯಶೋಧಮ್ಮ ಯರೇಶೀಮಿ , ಚಿಕ್ಕಮ್ಮ ಆಡೂರು, ನಿಶಾ, ವತ್ಸಲ್, ಹೇಮಲತಾ ಕೂರಗುಂದ, ಮೃತ್ಯುಂಜಯ ಕುಲಕರ್ಣಿ, ಕುಮಾರ ಎನ್.ಜಿ. ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net