ಮೂರೂವರೆ ಕೋಟಿ ರೂ. ಕಬ್ಬಿನ ಬಾಕಿ ಬಿಲ್ ಜಮೆ; ಸಂಗೂರ ಕಾರ್ಖಾನೆ ಎದುರು ಪ್ರತಿಭಟನೆ ವಾಪಸ್ ಪಡೆದ ರೈತರು

Kabbu belegara
Published on

ಹಾವೇರಿ: ತಾಲೂಕಿನ ಸಂಗೂರ ಗ್ರಾಮದ ಜಿಎಂ ಸಕ್ಕರೆ ಕಾರ್ಖಾನೆಗೆ ರೈತರು ಬುಧವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದ ಪರಿಣಾಮ ಕಾರ್ಖಾನೆಯವರು ಗುರುವಾರ ರೈತರ ಖಾತೆಗಳಿಗೆ ಮೂರುವರೆ ಕೋಟಿ ರೂ. ಸಂದಾಯ ಮಾಡಿದ್ದಾರೆ.
ಡಿಸೆಂಬರ್‌ನಿಂದ ಈವರೆಗೆ ಸುಮಾರು ಎರಡು ತಿಂಗಳ 50 ಕೋಟಿ ರೂ.ಗೂ ಅಧಿಕ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಈ ಕುರಿತು ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಹಣ ಬಿಡುಗಡೆ ಮಾಡಿರಲಿಲ್ಲ. ಹಾಗಾಗಿ, ಬುಧವಾರ ರೈತರು ಕಾರ್ಖಾನೆಯ ಎರಡೂ ಗೇಟ್‌ಗೆ ಬೀಗ ಜಡಿದು ಪ್ರತಿಭಟಿಸಿದ್ದರು. ಸಕ್ಕರೆ ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಕಬ್ಬು ಸಾಗಣೆ ಮಾಡಿದ 14 ದಿನದೊಳಗೆ ರೈತರ ಖಾತೆಗೆ ಹಣ ಜಮೆ ಮಾಡಬೇಕು ಎಂಬ ನಿಯಮವಿದ್ದರೂ ಕಾರ್ಖಾನೆಯವರು ಪಾಲಿಸಿರಲಿಲ್ಲ. ಹಾಗಾಗಿ, ಪ್ರತಿಭಟನೆಯಿಂದ ಕೊನೆಗೂ ಕಾರ್ಖಾನೆಯವರು ಎಚ್ಚೆತ್ತುಕೊಂಡಿದ್ದಾರೆ. ವಾರದೊಳಗೆ ಬಾಕಿ ಹಣ ಜಮೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಹಾಗಾಗಿ, ಪ್ರತಿಭಟನೆ ಹಿಂಪಡೆಯಲಾಗಿದೆ. ವಾರದೊಳಗೆ ಹಣ ಜಮೆ ಮಾಡದಿದ್ದಲ್ಲಿ ಮತ್ತೆ ಪ್ರತಿಭಟನೆ ಅನಿವಾರ್ಯ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದ್ದಾರೆ.
ಟನ್‌ಗೆ 3,050 ರೂ. ಕೊಡಿ
ಟನ್ ಕಬ್ಬಿಗೆ 3,050 ರೂ. ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದ ಕಾರ್ಖಾನೆ 3,024 ರೂ. ಮಾತ್ರ ಕೊಟ್ಟಿದೆ. ಬಾಕಿ 26 ರೂ. ಸೇರಿಸಿ ರೈತರಿಗೆ ಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net