

ಹಾವೇರಿ: ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಇಬ್ಬರು ದರೋಡೆಕೋರರನ್ನು ಗ್ರಾಮಸ್ಥರು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಸಂಗೂರ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೇಶ್ವರ ಸಮಗಾರ ಓಣಿಯ ನಿವಾಸಿ ಹನುಮಂತಪ್ಪ ತೋಳೆಪ್ಪ ಕುಂಚಿಕೊರವರ ಹಾಗೂ ಹುಬ್ಬಳ್ಳಿ ಕೇಶ್ವಾಪುರ ಕೊರವರ ಓಣಿ ನಿವಾಸಿ ಗಂಗಪ್ಪ ಯಲ್ಲಪ್ಪ ಕುಂಚಿಕೊರವರ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳರು.
ಗ್ರಾಮದ ಬಸವರಾಜ ಎಂಬುವರು ಮನೆಗೆ ಬೀಗ ಹಾಕಿ ಹೊಲಕ್ಕೆ ತೆರಳಿದ್ದರು. ಮಧ್ಯಾಹ್ನ ಕಳ್ಳರು ಮನೆ ಹಾಗೂ ಟ್ರಜರಿ ಕೀಲಿ ಮುರಿದು ಕಳ್ಳತನಕ್ಕೆ ಮುಂದಾಗಿದ್ದರು. ಬಸವರಾಜ ಮನೆಗೆ ವಾಪಸ್ ಬಂದು ಕಳ್ಳರು ಇರುವುದನ್ನು ಗಮನಿಸುತ್ತಿದ್ದಂತೆ ಅವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಬಸವರಾಜ ಜೋರಾಗಿ ಚೀರಾಡಿದಾಗ ಅಕ್ಕಪಕ್ಕದ ಜನ ಬಂದು ಕಳ್ಳರನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ಇಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ದೂರು ಕೊಡದ ಮಾಲೀಕ :
ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿ ಬೆದರಿಸಿದರೂ ಮನೆಯ ಮಾಲೀಕ ದೂರು ನೀಡಲಿಲ್ಲ. ಹಾಗಾಗಿ, ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಹಾಗೂ ಕಳ್ಳತನಕ್ಕೆ ಯತ್ನಿಸಿದ ಆರೋಪದಡಿ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಿಸಿ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.