

ಹಾವೇರಿ: ತಾಲೂಕಿನ ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಲೀಜ್ ಪಡೆದಿರುವ ಜಿಎಂ ಶುಗರ್ಸ್ ಕಂಪನಿ ವತಿಯಿಂದ ಫ್ಯಾಕ್ಟರಿಯಲ್ಲಿ ಶುಕ್ರವಾರ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮಿಗೆ ಕಾರ್ಖಾನೆ ಅಧಿಕಾರಿಗಳು ಹಾಗೂ ಕಬ್ಬು ಬೆಳೆಗಾರು ಚಾಲನೆ ನೀಡಿದರು.
ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಕಾರ್ಖಾನೆಯವರು ರೈತರಿಗೆ ಮೋಸ ಮಾಡದೇ ಕಬ್ಬು ಸಾಗಿಸಿದ ರೈತರಿಗೆ 14 ದಿನಗಳ ಒಳಗಾಗಿ ಹಣ ಪಾವತಿಸಬೇಕು. ಹಿಂದಿನ ವರ್ಷದ ಬಾಕಿ ಹಣವನ್ನು ಒಂದು ವಾರದ ಒಳಗಾಗಿ ಪಾವತಿಸಬೇಕು. ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೇ ಭರಿಸಿಕೊಳ್ಳಬೇಕು. ರೈತರಿಗೆ 3,550 ರೂ. ದರ ಕೊಡಬೇಕು ಎಂದರು.
ಕಬ್ಬು ಕಟಾವು ಮಾಡಲು ಬಂದ ತಂಡದವರಿಗೆ (ಗ್ಯಾಂಗ್) ಕಾರ್ಖಾನೆಯವರು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ರೈತರಿಗೆ ಗ್ಯಾಂಗ್‌ಗಳಿಂದ ತೊಂದರೆ ಆಗದಂತೆ ಕಾರ್ಖಾನೆಯವರು ನೋಡಿಕೊಳ್ಳಬೇಕು. ಕಾರ್ಖಾನೆಯ ಮಾಲೀಕರು ಆದಷ್ಟು ಬೇಗ ರೈತರ ಜತೆಗೆ ಚರ್ಚಿಸಿ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆ ಅಧ್ಯಕ್ಷ ಚಂದ್ರಪ್ಪ ವರ್ದಿ ಮಾತನಾಡಿ, ಪ್ರತಿ ಬಾರಿಯೂ ರಿಕವರಿಯಲ್ಲಿ ನಮಗೆ ಕಾರ್ಖಾನೆಯವರು ಮೋಸ ಮಾಡುತ್ತಿದ್ದಾರೆ. ನಮ್ಮ ಆಡಳಿತ ಮಂಡಳಿ ಕಾರ್ಖಾನೆಯನ್ನು ನಡೆಸುವಾಗ 10 ಪಾಯಿಂಟ್ 50 ಮತ್ತು 11ವರೆಗೆ ರಿಕವರಿ ಬರುತ್ತಿತ್ತು. ಈಗ ಗುತ್ತಿಗೆದಾರರು 9.42 ಬರುವ ಹಾಗೆ ಮಾಡಿದ್ದಾರೆ. ಇದರಿಂದ ರೈತರಿಗೆ ಅನ್ಯವಾಗುತ್ತದೆ. ಕಾರ್ಖಾನೆಯ ಮಾಲೀಕರು ರೈತರಿಗೆ ಮೋಸ ಮಾಡದೇ ಹೆಚ್ಚಿನ ಬೆಲೆ ಕೊಡಬೇಕೆಂದು ಹೇಳಿದರು.
ಕಾರ್ಖಾನೆ ಎಂಡಿ ನಟರಾಜ, ಪ್ರಸನ್ನ, ರಾಮಚಂದ್ರಪ್ಪ, ಹನುಮಂತಪ್ಪ, ಮುನಿಕುಮಾರ, ರೈತ ಮುಖಂಡರಾದ ಫಕೀರಪ್ಪ ಹುಲ್ಲಾಳ, ಪ್ರಕಾಶಗೌಡ ಪಾಟೀಲ, ರಾಜಶೇಖರ ಹಲಸೂರ, ಪ್ರಕಾಶ ಬೆಂಚಳ್ಳಿ, ಮಂಜುನಾಥ ಕ್ಯಾತಪ್ಪನವರ, ಮಲ್ಲಪ್ಪ ಕೋರಿ, ನಿರ್ದೇಶಕರಾದ ರಾಮಣ್ಣ ಮಾದಪ್ಪನವರ, ದಾನೇಶಪ್ಪ ಕೆಂಗೊಂಡ, ಫಕೀರಪ್ಪ ಕಟಾರಿ, ರಾಜು ಹೊನ್ನತ್ತಿ, ಕೊಡೆಪ್ಪ ದ್ಯಾವಣ್ಣನವರ, ನಂದೆಪ್ಪ ಲಮಾಣಿ, ಸಂಕಣ್ಣನವರ ಎಂ.ಎನ್, ಕಾರ್ಖಾನೆ ಸಿಬ್ಬಂದಿ, ಕಾರ್ಮಿಕರು ಇದ್ದರು.