

ಹಾವೇರಿ: ತಾಲೂಕಿನ ಸಂಗೂರ ಗ್ರಾಮದ ಜಿಎಂ ಶುಗರ್ಸ್ ಫ್ಯಾಕ್ಟರಿಯಲ್ಲಿ ಕಬ್ಬು ಬೆಳೆಗಾರರ 2 ಕೋಟಿ ರೂ.ಗೂ ಅಧಿಕ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಹಮ್ಮಿಕೊಂಡಿರುವ ಪ್ರತಿಭಟನೆ 20ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಕಾರ್ಖಾನೆಯವರು ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕಳೆದ ವರ್ಷದ ಕಬ್ಬಿನ ದರದಲ್ಲಿ ಕ್ವಿಂಟಲ್‌ಗೆ 116 ರೂ. ಬಾಕಿ ಕೊಡಬೇಕಿತ್ತು. ಹಣ ಬಿಡುಗಡೆಗೆ ಆಗ್ರಹಿಸಿ ಕಾರ್ಖಾನೆ ಬಂದ್ ಮಾಡಿ ರೈತರು ಪ್ರತಿಭಟನೆ ಆರಂಭಿಸಿ 20 ದಿನ ಕಳೆದರೂ ಯಾರೂ ಸಮಸ್ಯೆಗೆ ಪರಿಹಾರ ಒದಗಿಸುತ್ತಿಲ್ಲ. ಈ ನಡುವೆ ಕಾರ್ಖಾನೆಯಲ್ಲಿ ದುಡಿಯುವ ಬಡ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಇದರಿಂದ ಕಾರ್ಮಿಕರ ಬದುಕು ಬೀದಿಗೆ ಬಂದಂತಾಗಿದೆ. ರೈತರಿಗೂ ಬಾಕಿ ಹಣ ಸಿಗದಂತಾಗಿದೆ. ಯಾವುದೇ ಕಾರಣಕ್ಕೂ ಬಾಕಿ ಹಣ ಬಿಡುಗಡೆ ಆಗುವವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ವೀರೇಶ ಮತ್ತಿಹಳ್ಳಿ, ಸುರೇಶಗೌಡ ಪಾಟೀಲ, ರಾಮಣ್ಣ ಮಾದಪ್ಪನವರ, ಬಿ.ವಿ ಹುಲ್ಲಾಳ, ಎ.ಜೆ ಮಿಠಾಯಿಗಾರ, ಎಸ್.ಟಿ ಹಾದಿಮನಿ, ಸುರೇಶ ಶೀಗಿಹಳ್ಳಿ, ಬಿ.ಪಿ ವರದಿ, ಇತರರಿದ್ದರು.
ಶಾಸಕ ಶಿವಣ್ಣನವರ ಭೇಟಿ
ಸಂಗೂರ ಗ್ರಾಮದ ಸಕ್ಕರೆ ಕಾರ್ಖಾನೆ ಬಳಿ ಶಾಸಕ ಬಸವರಾಜ ಶಿವಣ್ಣನವರ ಭೇಟಿ ನೀಡಿ, ರೈತರ ಅಹವಾಲು ಆಲಿಸಿದರು. ಈ ಕುರಿತ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಗುತ್ತಿಗೆದಾರರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.