ಕಬ್ಬಿನ ಬಾಕಿ ಬಿಲ್ ಪಾವತಿಗೆ ರೈತರ ಆಗ್ರಹ; 57 ಕೋಟಿ ರೂ. ಉಳಿಸಿಕೊಂಡ ಸಂಗೂರಿನ ಜಿಎಂ ಶುಗರ್ಸ್; ಪ್ರತಿಭಟನೆಗೆ ಸಜ್ಜಾದ ಕಬ್ಬು ಬೆಳೆಗಾರರು

5 Kabbu B
Published on

ವಿಜಯವಾಣಿ ವಿಶೇಷ ಹಾವೇರಿ

ಕಬ್ಬು ಪೂರೈಕೆ ಮಾಡಿ 14 ದಿನಗಳಲ್ಲಿ ರೈತರಿಗೆ ಹಣ ಪಾವತಿಸಬೇಕು ಎಂಬ ಸರ್ಕಾರದ ನಿಯಮವನ್ನು ದಿಕ್ಕರಿಸಿದ ತಾಲೂಕಿನ ಸಂಗೂರ ಗ್ರಾಮದ ಜಿಎಂ ಶುಗರ್ಸ್ ಫ್ಯಾಕ್ಟರಿ 45 ದಿನ ಕಳೆದರೂ ಕಬ್ಬು ಬೆಳೆಗಾರರ ಹಣ ಪಾವತಿಸದೇ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ಇದರಿಂದ ಬೇಸತ್ತ ಅನ್ನದಾತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ನವೆಂಬರ್ ಆರಂಭದಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆ ಚಾಲನೆ ನೀಡಿತ್ತು. ಅಂದಿನಿಂದ ಈವರೆಗೆ ಕಾರ್ಖಾನೆಯವರು ರೈತರಿಂದ 2.70 ಲಕ್ಷ ಟನ್ ಕಬ್ಬು ಪಡೆದಿದ್ದಾರೆ. ಅದರಲ್ಲಿ ನವೆಂಬರ್ 20ರವರೆಗೆ 80,000 ಟನ್ ಕಬ್ಬಿನ ದರ 24.19 ಕೋಟಿ ರೂ.ಯನ್ನು ರೈತರಿಗೆ ಪಾವತಿಸಿದ್ದಾರೆ. ಉಳಿದಂತೆ ಅಂದಾಜು 1.90 ಲಕ್ಷ ಟನ್ ಕಬ್ಬಿನ ದರ, 2,700 ರೈತರ 57.45 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಸರ್ಕಾರ ಟನ್ ಕಬ್ಬಿಗೆ 3,150 ರೂ. ಎಫ್‌ಆರ್‌ಪಿ ನಿಗದಿಪಡಿಸಲಾಗಿತ್ತು. ಆದರೆ ರಿಕವರಿ ಆಧಾರದ ಮೇಲೆ ಬೇರೆ ಬೇರೆ ದರ ನಿಗದಿಪಡಿಸಲಾಗುತ್ತದೆ. ಜಿಎಂ ಶುಗರ್ಸ್ ಹಾಗೂ ರೈತರು 3,050 ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೂ ಕಾರ್ಖಾನೆಯವರು 3,024 ರೂ. ಕೊಡುತ್ತಿದ್ದಾರೆ. ಅದರಲ್ಲೂ ಇದರಲ್ಲೂ 26 ರೂ. ಕಡಿತಗೊಳಿಸುತ್ತಿದ್ದಾರೆ. ಈ ಮೊದಲು 10.5, 11 ಇರುತ್ತಿದ್ದ ರಿಕವರಿ ಈಗ 9.5 ಎಂದು ತೋರಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂಬುದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆರೋಪ.
ಜಿಲ್ಲೆಯಲ್ಲಿ ಬೆಳೆದ ಕಬ್ಬಿಗೆ ಹತ್ತಾರು ಕಾರ್ಖಾನೆಗಳಿಂದ ಬೇಡಿಕೆ ಇದೆ. ಉತ್ತರ ಕರ್ನಾಟಕದ ಅನೇಕ ಕಾರ್ಖಾನೆಗಳು ಜಿಲ್ಲೆಯ ರೈತರ ಕಬ್ಬನ್ನು ಖರೀದಿಸುತ್ತಿವೆ. ಪ್ರಭುಲಿಂಗೇಶ್ವರ ಶುಗರ್ಸ್, ನಿರಾಣಿ ಶುಗರ್ಸ್, ಐಸಿಪಿಎಲ್ ಮುಧೋಳ, ಬೆಳಗಾವಿ ಶುಗರ್ಸ್, ಬೈಲಹೊಂಗಲ ಶುಗರ್ಸ್, ಮಲಪ್ರಭಾ ಶುಗರ್ಸ್, ಹರ್ಷ ಶುಗರ್ಸ್ ಸೇರಿದಂತೆ ಇನ್ನೂ ಅನೇಕ ಕಾರ್ಖಾನೆಗಳು ಹಾವೇರಿ ಜಿಲ್ಲೆ ಹಾಗೂ ಮುಂಡಗೋಡದಲ್ಲಿನ ಕಬ್ಬು ತೆಗೆದುಕೊಂಡು ಹೋಗುತ್ತಾರೆ.
ಟನ್ ಕಬ್ಬಿಗೆ 3,000 ರೂ. ಕೊಟ್ಟು ಅವರೇ ಕಡಿದುಕೊಂಡು ಖರೀದಿಸುತ್ತಾರೆ. ಹೀಗಿರುವಾಗ ರೈತರೇ ಕಟಾವು ಮಾಡಿ ಸಾರಿಗೆ ವೆಚ್ಚ ಭರಿಸಿ ಕಾರ್ಖಾನೆಗೆ ತಂದರೂ ಜಿಎಂ ಶುಗರ್ಸ್‌ನವರು ಬಾಕಿ ಉಳಿಸಿಕೊಳ್ಳುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕಟಾವು ಮಾಡಿದ ಆಳುಗಳಿಗೆ, ಸಾರಿಗೆ ವೆಚ್ಚ ಕಳೆದರೆ 2 ಸಾವಿರವೂ ಉಳಿಯುವುದಿಲ್ಲ. ಹೀಗಾಗಿ ಕಬ್ಬು ಬೆಳೆ ಕಡಿಮೆಯಾಗುವ ಆತಂಕವಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಈ ಸಮಸ್ಯೆ ಕುರಿತು ಈಗಾಗಲೇ ಜಿಲ್ಲಾಧಿಕಾರಿಯವರ ಬಳಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಬೇರೆ ಕಾರ್ಖಾನೆಯವರು ನವೆಂಬರ್ 30ರವರೆಗೆ ಬಾಕಿ ಹಣ ಹಾಕಿದ್ದಾರೆ. ವಿಐಎನ್‌ಪಿ ಕೋಣನಕೆರೆ ಕಾರ್ಖಾನೆ ಡಿಸೆಂಬರ್ ಬಿಲ್ ಹಾಕುತ್ತಿದೆ. ಸಂಗೂರು ಕಾರ್ಖಾನೆ ಮಾತ್ರ ಬಾಕಿ ಕೊಡುತ್ತಿಲ್ಲ.

ಕೋಟ್:
ಜಿ.ಎಂ.ಶುಗರ್ಸ್‌ನವರು ಕಬ್ಬು ಬೆಳೆಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿೃಸಿದೆ. ಪ್ರತಿ ವರ್ಷವೂ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡು ಅನ್ಯಾಯ ಎಸಗುತ್ತಿದೆ. ಹಾಗಾಗಿ, ಕಬ್ಬಿನ ಬಾಕಿ ಬಿಲ್ ಪಾವತಿಸಲು ಜ.8ರವರೆಗೆ ಕಾಲಾವಕಾಶ ಕೊಟ್ಟಿದ್ದೇವೆ. ಅಷ್ಟರೊಳಗೆ ಹಣ ಪಾವತಿ ಮಾಡದಿದ್ದಲ್ಲಿ ಜ.8ರಂದು ಬೆಳಗ್ಗೆ 10 ಗಂಟೆಗೆ ಕಾರ್ಖಾನೆ ಎದುರು ಹಾನಗಲ್ಲ ರಸ್ತೆ ಸಂಚಾರ ತಡೆದು ಪ್ರತಿಭಟಿಸಲಾಗುವುದು.
- ಭುವನೇಶ್ವರ ಶಿಡ್ಲಾಪುರ, ಜಿಲ್ಲಾಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ

ಸಂಪರ್ಕಕ್ಕೆ ಸಿಗಲಿಲ್ಲ
ರೈತರ ಸಮಸ್ಯೆ ಕುರಿತು ಫ್ಯಾಕ್ಟರಿ ಅಧಿಕಾರಿಗಳಿಗೆ ಕರೆ ಮಾಡಿದರೆ ಕೆಲವರು ಕರೆ ಸ್ವೀಕರಿಸಲಿಲ್ಲ. ಸಿಕ್ಕ ಕೆಲವರು ಅವರನ್ನು ಕೇಳಿ, ಇವರನ್ನು ಕೇಳಿ ಎಂದು ಹಾರಿಕೆ ಉತ್ತರ ಕೊಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net