

ಹಾವೇರಿ: ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧೀಜಿ ಪಾತ್ರ ಮಹತ್ತರವಾದದ್ದು. ಅವರ ಸತ್ಯ, ಅಹಿಂಸೆ, ಸರ್ವ ಧರ್ಮ ಸಮಭಾವ ಮೌಲ್ಯಗಳನ್ನು ಇಂದಿನ ವಿದ್ಯಾರ್ಥಿ ಯುವಜನತೆ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸೈನಿಕ ಶ್ರೀನಿವಾಸ ಯರೇಸೀಮಿ ಹೇಳಿದರು.
ತಾಲೂಕಿನ ಸಂಗೂರ ಗ್ರಾಮದಲ್ಲಿನ ಮಹಾತ್ಮ ಗಾಂಧಿ ಚಿತಾಭಸ್ಮ ಸ್ಮಾರಕ ಕಟ್ಟೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಾತಂತ್ರ್ಯ ಸೇನಾನಿ ಸಂಗೂರ ಕರಿಯಪ್ಪನವರ ಕುಟುಂಬದವರ ಸಮ್ಮುಖದಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಘಾಟ್ ಮಾದರಿಯಲ್ಲಿ ಈ ಚಿತಾಭಸ್ಮ ಸ್ಮಾರಕವನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಬೇಕು ಎಂದರು.
ಬ್ರಿಟೀಷರ ದಬ್ಬಾಳಿಕೆಯಿಂದ ನಲುಗಿದ್ದ ರಾಷ್ಟ್ರವನ್ನು ಸ್ವತಂತ್ರಗೊಳಿಸಲು ಗಾಂಧೀಜಿ ದೇಶವ್ಯಾಪಿ ಸಂಚರಿಸಿ ಚಳವಳಿ ರೂಪಿಸಿದರು. ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸಂಗೂರ ಕರಿಯಪ್ಪನವರು ಗಾಂಧೀಜಿಯವರ ಅಪ್ಪಟ ಶಿಷ್ಯರಾಗಿದ್ದುಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಇಂತಹ ಮಹಾನ್ ವ್ಯಕ್ತಿತ್ವಗಳನ್ನು ಇಂದಿನ ಯುವಜನರಿಗೆ ಪರಿಚಯಿಸುವುದು ಅತ್ಯಗತ್ಯವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಸ್ಲಂ ಜಿಗಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಪಾಟೀಲ, ಚಿಕ್ಕಮ್ಮ ಆಡೂರು, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಮಾಜಿ ಸೈನಿಕ ಮಂಜುನಾಥ ಗೌರಕ್ಕನವರ, ಗಣೇಶ ಬೆಳಕೇರಿ, ಸರೋಜಿನಿ ಯರೇಸಿಮಿ, ಬಸವ್ವ ಯರೇಸೀಮಿ, ಪುಷ್ಪಾ ಯರೇಸೀಮಿ, ತಿರಕವ್ವ ಯರೇಶಿಮಿ, ವಿನೋದಾ ಯರೇಸಿಮಿ, ಚಿದಾನಂದ ಯರೇಸೀಮಿ, ಶಂಕರ ಹೊನ್ನತ್ತಿ, ಪಿ.ಕೆ ಕರ್ಜಗಿ, ಮುತ್ತಪ್ಪ ವಡಕಣ್ಣನವರ, ಮತ್ತಿತರರು ಪಾಲ್ಗೊಂಡಿದ್ದರು.