

ಹಾವೇರಿ: ತಾಲೂಕಿನ ಸಂಗೂರ ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿ ಹಾಲು ಶೇಖರಣೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಸಂಗೂರಿನ ರೈತರು ನಗರದ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಹಾವೆಮುಲ್)ದ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕಳೆದ ಇಪ್ಪತ್ತು ವರ್ಷಗಳಿಂದ ಸಂಗೂರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಕಾಲಕ್ಕೂ ಸಂಘದಲ್ಲಿ ಹಾಲು ಶೇಖರಣೆ ಸ್ಥಗಿತಗೊಂಡಿದ್ದಿಲ್ಲ. ಇಲ್ಲಿ ಹಾಲು ಶೇಖರಣೆ ಮಾಡುತ್ತಿದ್ದರಿಂದ ಸಂಗೂರ ಸುತ್ತಮುತ್ತಲಿನ ಗ್ರಾಮಗಳ ರೈತರಿಗೂ ತುಂಬಾ ಅನುಕೂಲವಾಗಿತ್ತು. ಬೇಸಿಗೆ ಕಾಲವಾಗಿದ್ದರಿಂದ ಸಂಘದಲ್ಲಿ ಸ್ವಲ್ಪಮಟ್ಟಿಗೆ ಹಾಲಿನ ಶೇಖರಣೆ ಪ್ರಮಾಣ ಕಡಿಮೆಯಾಗಿತ್ತು. ಅದನ್ನೇ ನೆಪವಾಗಿಟ್ಟುಕೊಂಡು ಸಂಗೂರಿನ ಹಾಲು ಉತ್ಪಾದನಾ ಸಂಘದಿಂದ ಹಾಲು ಶೇಖರಣೆಯನ್ನು ಜೂ.1ರಿಂದ ಬಂದ್ ಮಾಡಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ದಿನನಿತ್ಯ ಸಂಗ್ರಹಗೊಳ್ಳುತ್ತಿದ್ದ ಹಾಲನ್ನು ಯಾರಿಗೆ ನೀಡಬೇಕು ಎಂಬುದೇ ರೈತರಿಗೆ ದಿಕ್ಕು ತೋಚದಂತಾಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ಸಂಗೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಸವೇಶ್ವರಗೌಡ ಪಾಟೀಲ, ಉಡಚಪ್ಪ ವರ್ದಿ, ನಿಂಗಪ್ಪ ಆಡೂರ, ಶೇಖಣ್ಣ ಬೆಳವಗಿ, ಬಸಣ್ಣ ಸಿದ್ದಪ್ಪನವರ, ನಿಂಗಪ್ಪ ಕಮ್ಮಾರ, ರಾಜು ಎಂ., ನಾಗಪ್ಪ ಸಜ್ಜನ, ಪುಟ್ಟಪ್ಪ ಚಪ್ಪರಮನಿ, ಮತ್ತಿತರರು ಪಾಲ್ಗೊಂಡಿದ್ದರು.
ಸಂಜೆಯಿಂದಲೇ ಸ್ವೀಕಾರ :
ಪ್ರತಿಭಟನಾ ಸ್ಥಳಕ್ಕೆ ಸ್ಥಳೀಯ ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ ಹಾಗೂ ವ್ಯವಸ್ಥಾಪಕ ಡಿ.ಟಿ.ಕಳಸದ ಆಗಮಿಸಿ ರೈತರ ಸಮಸ್ಯೆ ಆಲಿಸಿದರು. ಕೆಲಕಾಲ ಮಾತಿನ ಜಟಾಪಟಿ ನಡೆಯಿತು. ಬಳಿಕ ಅರಬಗೊಂಡ ಅವರು, ತಕ್ಷಣವೇ ಸಂಗೂರ ಹಾಲು ಉತ್ಪಾದಕರ ಸಂಘದಿಂದ ಹಾಲು ಶೇಖರಣೆ ಮಾಡುವ ಜತೆಗೆ, ಹಾಲಿನ ಪ್ರೋತ್ಸಾಹ ಧನ ಸರಿಯಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದು ಮುಂದಿನ ದಿನಗಳಲ್ಲಿ ಹಾಲನ್ನು ಹೆಚ್ಚಿಗೆ ಪ್ರಮಾಣದಲ್ಲಿ ಶೇಖರಿಸುತ್ತೇವೆ ಎಂದು ಹೇಳಿದರು. ಶುಕ್ರವಾರ ಸಂಜೆಯಿಂದಲೇ ಸಂಗೂರ ಗ್ರಾಮದಲ್ಲಿ ಹಾಲು ಸಂಗ್ರಹ ಕಾರ್ಯ ಆರಂಭಗೊಂಡಿತು ಎಂದು ಭುವನೇಶ್ವರ ಶಿಡ್ಲಾಪುರ ತಿಳಿಸಿದರು.