ಅಧಿಕಾರಿಗಳಿಂದ ಹಾವೇರಿ ನಗರದ ಸ್ವಚ್ಛತೆ; ಸಾಮೂಹಿಕ ಶ್ರಮದಾನದಲ್ಲಿ ಶಾಸಕ ರುದ್ರಪ್ಪ ಲಮಾಣಿ, ಡಿಸಿ, ಎಡಿಸಿ ಭಾಗಿ

1 HVR 5 C
Published on

ಹಾವೇರಿ: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಸಾಮೂಹಿಕ ಶ್ರಮದಾನ ಹಾಗೂ ಸ್ವಚ್ಛತಾ ಕಾರ್ಯ ನಡೆಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪೊರಕೆ ಹಿಡಿದು ಸ್ವಚ್ಛಗೊಳಿಸುವ ಮೂಲಕ ಸಾಮೂಹಿಕ ಶ್ರಮದಾನಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಅವರು ಚಾಲನೆ ನೀಡಿದರು. ಅಂಬೇಡ್ಕರ್ ಪುತ್ಥಳಿಯ ಸುತ್ತಮುತ್ತ ಕಸ ಹಾಕದಂತೆ, ಸ್ವಚ್ಛಚಾಗಿ ಇಟ್ಟುಕೊಳ್ಳುವಂತೆ ಸ್ಥಳೀಯ ನಿವಾಸಿಗಳಿಗೆ ತಿಳಿವಳಿಕೆ ನೀಡಿದರು. ನಗರದ ವಿವಿಧ ವೃತ್ತಗಳು ಹಾಗೂ ರಸ್ತೆಯಲ್ಲಿ ಪೊರಕೆ ಹಿಡಿದು ಅಧಿಕಾರಿಗಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ನಂತರ ಶಿವಬಸವನಗರ ಹಾಗೂ ಸಿಂದಗಿಮಠದ ಸುತ್ತಮುತ್ತಲಿನ ನಿವಾಸಿಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು.
ಶಿವಬಸವನಗರ ಹಾಗೂ ಸಿಂದಗಿಮಠದ ಸುತ್ತಮುತ್ತ ಸ್ವಚ್ಛತಾ ಕಾರ್ಯದಲ್ಲಿ ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಶ್ರಮದಾನದಲ್ಲಿ ಭಾಗವಹಿಸಿದರು.
ಶಿವಾಜಿನಗರ ಮೂರನೇ ಕ್ರಾಸ್‌ನಲ್ಲಿ ನಗರಸಭೆ ಸದಸ್ಯೆ ಚನ್ನಮ್ಮ ಬ್ಯಾಡಗಿ ದುಂಡಿ ಬಸವೇಶ್ವರ ಪಾರ್ಕ್‌ನಲ್ಲಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ಹಾಗೂ ವಾರ್ತಾಧಿಕಾರಿ ಭಾರತಿ ಎಚ್. ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ನಗರದ ಸಂಗೂರ ಕರಿಯಪ್ಪ ವೃತ್ತ ಹಾಗೂ ಗುತ್ತಲ ರಸ್ತೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಎಂ.ಎಸ್. ನೇತೃತ್ವದಲ್ಲಿ ಇಲಾಖೆ ಸಿಬ್ಬಂದಿ ಹಾಗೂ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಬಸವೇಶ್ವರ ನಗರದಲ್ಲಿ ನಗರಸಭೆ ಸದಸ್ಯರಾದ ಗಿರೀಶ ತುಪ್ಪದ, ಎಂ.ಹೂಲಿಕಂತಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ.ಪಿ.ಆರ್.ಹಾವನೂರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಜೆ.ಸಿ.ನಿಡಗುಂದಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಹಾಗೂ ಆರೋಗ್ಯ ಇಲಾಖೆ ವಿವಿಧ ಅಧಿಕಾರಿಗಳು, ಸಿಬ್ಬಂದಿ ಶ್ರಮದಾನದಲ್ಲಿ ಭಾಗವಹಿಸಿದ್ದರು.
ತಹಸೀಲ್ದಾರ್ ಶರಣಮ್ಮ, ಗ್ರೆಡ್-2 ತಹಸೀಲ್ದಾರ್ ಅಮೃತಗೌಡ ಪಾಟೀಲ, ಪೌರಾಯುಕ್ತ ಪರಶುರಾಮ ಚಲವಾದಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಉಮೇಶಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಅಬಕಾರಿ ಇಲಾಖೆ ಉಪ ಆಯುಕ್ತೆ ಶೈಲಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಕಂದಾಯ ಇಲಾಖೆ, ವಿವಿಧ ಅಭಿವೃದ್ಧಿ ನಿಗಮ, ಪಂಚಾಯತ್ ರಾಜ್ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
32 ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ
ನಗರದ ಎಲ್ಲ 32 ವಾರ್ಡ್‌ಗಳ ನಗರಸಭೆ ಸದಸ್ಯರು ಹಾಗೂ ಐವತ್ತಕ್ಕೂ ಅಧಿಕ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಒಂದು ಸಾವಿರಕ್ಕೂ ಅಧಿಕ ಜನರ ತಂಡ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಜೆ.ಎಚ್.ಪಟೇಲ್ ವೃತ್ತ, ವಿ.ಕೃ.ಗೋಕಾಕ ವೃತ್ತ, ಬಸವೇಶ್ವರ ವೃತ್ತ, ಸುಭಾಸ ವೃತ್ತ, ವಿ.ಕೃ.ಗೋಕಾಕ, ಜೆ.ಪಿ.ವೃತ್ತ, ಮಹಾತ್ಮಗಾಂಧಿ ವೃತ್ತ, ಮೈಲಾರ ಮಹದೇವಪ್ಪ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಕಿತ್ತೂರ ಚನ್ನಮ್ಮ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ, ವಿವಿಧ ಉದ್ಯಾನವನಗಳು, ನಗರದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆ ಕಾರ್ಯ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net