

ಹಾವೇರಿ: ವಿದ್ಯಾರ್ಥಿ ನಿಲಯಗಳಲ್ಲಿರುವ ಮಕ್ಕಳ ಪಾಲಕರು ಹಾಗೂ ಪೋಷಕರು ಇಲಾಖೆಯ ಜತೆ ಕೈಜೋಡಿಸುವ ಮೂಲಕ ಅವರ ರಕ್ಷಣೆ ಹಾಗೂ ಅವರ ಶೈಕ್ಷಣಿಕ ಪ್ರಗತಿಗೆ ಕಾರಣೀಭೂತರಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ ಮನವಿ ಮಾಡಿದರು.
ನಗರದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಾವೇರಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 2025-26ನೇ ಸಾಲಿಗೆ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಪಾಲಕರ ಹಾಗೂ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ವಿದ್ಯಾರ್ಥಿ ನಿಲಯಗಳಲ್ಲಿ ಪ್ರಸ್ತುತ ವರ್ಷ 877 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಮಕ್ಕಳನ್ನು ಬಾಲ್ಯ ವಿವಾಹ ಮಾಡದೇ ಹಾಗೂ ಬಾಲಕಾರ್ಮಿಕರನ್ನಾಗಿ ಮಾಡದೇ ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಜತೆಗೆ ಒಳ್ಳೆಯ ಸಂಸ್ಕಾರಗಳನ್ನು ನೀಡಬೇಕು. ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದರು.
ಉಪನ್ಯಾಸಕ ಡಾ.ದಯಾನಂದ ಸುತ್ತಕೋಟಿ ಹಾಗೂ ಮುಖ್ಯೋಪಾಧ್ಯಾಯ ಹೊನ್ನಪ್ಪ ತಳವಾರ ಮಾತನಾಡಿ, ಮಕ್ಕಳಿಗೆ ತಂದೆ ತಾಯಿಗಳು ಸೂಕ್ತ ಬುದ್ದಿಮಾತು ಹೇಳುವ ಮೂಲಕ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚಿನ ಒಲವು ತೋರುವಂತೆ ಮಾಡಬೇಕೆಂದರು. ವಿದ್ಯಾರ್ಥಿ ನಿಲಯಗಳ ನಿಲಯ ಪಾಲಕರ ಜತೆಗೆ ಸಮನ್ವಯತೆಯಿಂದ ಸ್ಪಂದಿಸಬೇಕು ಎಂದರು.
ವಸತಿ ನಿಲಯಗಳ ನಿಲಯ ಪಾಲಕರಾದ ಭಾಗ್ಯಜ್ಯೋತಿ ಹುಲ್ಲಾಳ, ಅಕ್ಕಮಹಾದೇವಿ ದೊಡ್ಡಗೌಡರ, ಗಂಗಮ್ಮ ಕಾರಿಕಂಟಿ, ನಂದಕ್ಕ ಹೂಗಾರ, ಇಲಾಖೆಯ ಸಿಬ್ಬಂದಿ, ಇತರರಿದ್ದರು.