

ಹಾವೇರಿ: ಕೇಂದ್ರ ಚುನಾವಣಾ ಆಯೋಗದ ನೀತಿಗಳನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆ.5ರಂದು ಬೆಳಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೇಂದ್ರ ಕ್ಷೇತ್ರ ಮಹಾದೇವಪುರ ಮತ್ತು ರಾಯಗಢ ಕ್ಷೇತ್ರ ಸೇರಿ ಕೆಲ ಕ್ಷೇತ್ರಗಳಲ್ಲಿ ಮತಗಳ ದುರ್ಬಳಕೆ ಆಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸೇರಿ ಅನೇಕ ಮುಖಂಡರು ಸೇರಿ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜಿಲ್ಲೆಯಿಂದಲೂ ನೂರಾರು ಜನ ಭಾಗವಹಿಸುವರು ಎಂದರು.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಸುಮಾರು 28 ಲಕ್ಷ ಮತದಾರರನ್ನು ಐದಾರು ತಿಂಗಳಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಕೇಂದ್ರದ ಬಿಜೆಪಿಯು ಪ್ರಜಾಪ್ರಭುತ್ವ ನಿರ್ನಾಮ ಮಾಡಲು ಹೊರಟಿದೆ. ಈ ಕುರಿತು ರಾಹುಲ ಗಾಂಧೀ 7 ತಿಂಗಳಿನಿಂದ ಮಾಹಿತಿ ಕಲೆ ಹಾಕಿದ್ದಾರೆ. ಬಿಹಾರದಲ್ಲಿ 65 ಲಕ್ಷ ಮತದಾರರನ್ನು ಹೆಚ್ಚಿಸಲಾಗಿದೆ. ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ. ದಾಖಲೆ ಸಮೇತ ಹೇಳುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಯು.ಬಿ.ಬಣಕಾರ, ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ಹೂಡಾ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಎಂ.ಎಂ.ಹಿರೇಮಠ, ಕೊಟ್ರೇಶಪ್ಪ ಬಸೇಗಣ್ಣಿ, ಡಿ.ಬಸವರಾಜ, ಡಾ.ಸಂಜಯ ಡಾಂಗೆ, ಎಂ.ಎಂ.ಮೈದೂರ, ಇತರರಿದ್ದರು.
ರಾಜ್ಯದಲ್ಲಿ ನವೆಂಬರ್ ಕ್ರಾಂತಿ
ಇದೇ ವರ್ಷ ನವೆಂಬರ್‌ನಲ್ಲಿ ದೇಶದಲ್ಲಿ ಕ್ರಾಂತಿ ಆಗಲಿದೆ. ಸಚಿವ ಸಂಪುಟ ವಿಸ್ತರಣೆ ಮಾಡುವ ಮೂಲಕ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತೇವೆ. ಕೆಲ ಹಿರಿಯರಿಗೆ ಪಕ್ಷ ಸಂಘಟನೆ ಜವಾಬ್ದಾರಿ ಜತೆಗೆ ಹೊಸಬರಿಗೆ ಸಚಿವ ಸಂಪುಟ ಸೇರುವ ಅವಕಾಶ ಕಲ್ಪಿಸುತ್ತೇವೆ. ನವೆಂಬರ್‌ನಲ್ಲಿ ರಾಜ್ಯದಲ್ಲಿ ಶಾಂತಿ ಇದ್ದರೆ, ಕೇಂದ್ರದಲ್ಲಿ ಕ್ರಾಂತಿಯಾಗುತ್ತದೆ. ಮೋದಿ ಅವರಿಗೆ 75 ವರ್ಷ ಆಗಲಿದೆ ಎಂದು ಕುಟುಕಿದರು.
ಪ್ರಜ್ವಲ್‌ಗೆ ಶಿಕ್ಷೆ, ಸ್ವಾಗತಾರ್ಹ
ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿರುವುದು ಸ್ವಾಗತಾರ್ಹ. ಕೋರ್ಟಿನ ತೀರ್ಪಿಗೆ ಪ್ರತಿಯೊಬ್ಬರು ತಲೆಬಾಗಲೇಬೇಕು. ಕಾನೂನಿನ ಮುಂದೆ ಬಡವರು, ಶ್ರೀಮಂತರು ಎಲ್ಲರೂ ಒಂದೇ. ಯಾರು ತಪ್ಪು ಮಾಡಿರುತ್ತಾರೆ ಅವರಿಗೆ ಶಿಕ್ಷೆ ಆಗುತ್ತದೆ. ಇದು ಎಲ್ಲರಿಗೂ ದೊಡ್ಡ ಸಂದೇಶ ಎಂದರು ಸಲೀಂ.