ಸಾಲದ ಸುಳಿಗೆ ಸಿಲುಕಿದವರ ರಕ್ಷಣೆಗಾಗಿ ಅಭಿಯಾನ

Published on

ಹಾವೇರಿ: ಮೈಕ್ರೋ ಫೈನಾನ್ಸ್‌ಗಳ ಸಾಲದ ಸುಳಿಯಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಸಾಲ ಮುಕ್ತಿ ಕೇಂದ್ರ ಸಂಸ್ಥೆಯ ವತಿಯಿಂದ ಋಣ ಮುಕ್ತ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಾಲಮುಕ್ತ ಭಾರತ ಅಭಿಯಾನದ ಜಿಲ್ಲಾಧ್ಯಕ್ಷ ಪ್ರಶಾಂತ ಬಾಂಗ್ರೆ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲಮುಕ್ತ ಭಾರತ ಅಭಿಯಾನದಡಿ ವಿವಿಧ ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿ ಸಾಲದ ಸುಳಿಯಲ್ಲಿ ನೊಂದಿರುವವರಿಗೆ ಸಾಲದಿಂದ ಹೊರಬರುವ ಕುರಿತು ಉಚಿತ ತರಬೇತಿ ನೀಡಲಾಗುವುದು. ಆತ್ಮಹತ್ಯೆಯ ನಿರ್ಧಾರ ಮಾಡಿದ ಹಲವರಿಗೆ ಜೀವನೋಪಾಯದ ಮಾರ್ಗ ತಿಳಿಸಿಕೊಡುತ್ತಿದ್ದೇವೆ. ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಲಾಗುವುದು ಎಂದರು.

ಅಭಿಯಾನದ ಜಿಲ್ಲಾ ಕಾರ್ಯದರ್ಶಿ ಜಗದೀಶ ಯಾವಗಲ್ಲಮಠ ಮಾತನಾಡಿ, ಜಿಲ್ಲಾಡಳಿತದಿಂದ ಮೈಕ್ರೋ ಫೈನಾನ್ಸ್ ನಿಂದ ತೊಂದರೆಗೆ ಒಳಗಾದವರ ನೋವಿಗೆ ಸ್ಪಂದಿಸಲು ಸಹಾಯವಾಣಿ ಆರಂಭಿಸಿರುವುದು ಸ್ವಾಗತಾರ್ಹ. ಕರೊನಾ ಲಾಕ್‌ಡೌನ್, ನೋಟು ಅಮಾನ್ಯೀಕರಣ, ಇತರ ಕಾರಣಗಳಿಂದ ಜನಸಾಮಾನ್ಯರ ಜೀವನ ದುಸ್ತರವಾಗಿದ್ದು, ಸುಮಾರು 10 ಲಕ್ಷ ರೂ.ವರೆಗಿನ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ಇಲ್ಲದಿದ್ದರೇ ಸಾಲ ಮರುಪಾವತಿ ಮಾಡಲು ಕನಿಷ್ಠ 2 ವರ್ಷ ಕಾಲಾವಕಾಶ ನೀಡಬೇಕು. ಆರ್‌ಬಿಐ ಗೈಡ್‌ಲೈನ್ ಪಾಲಿಸದ ಫೈನಾನ್ಸ್‌ಗಳನ್ನು ಬಂದ್ ಮಾಡಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹನುಮಂತಪ್ಪ ಕಬ್ಬಾರ, ಹುಚ್ಚನಗೌಡ ಜಿ.ಎಸ್., ಸುನೀಲ ಬೇಟಗೇರಿ, ಮಂಜೀರ್‌ಅಹ್ಮದ್ ದೇವಿಹೊಸೂರ, ದುರುಗೇಶ ವಿ., ಗುರುರಾಜ ಗದಿಗೆಪ್ಪನವರ, ರೋಶನ್ ಬಿಲ್ಲೋರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net