ಕೊನೆಗೂ ಕಲಾವಿದರ ಕೈಸೇರಿದ ಸಂಭಾವನೆ; 50.17 ಲಕ್ಷ ರೂ. ಜಮೆ

24 HVR 6
Published on

ಹಾವೇರಿ: ನಗರದಲ್ಲಿ ಜನವರಿ 6, 7 ಹಾಗೂ 8ರಂದು ಜರುಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದ ರಾಜ್ಯದ 227 ಕಲಾ ತಂಡಗಳ ಕಲಾವಿದರಿಗೆ ಕೊನೆಗೂ ಸಂಭಾವನೆ ಕೈಸೇರಿದೆ.
ಸಮ್ಮೇಳನದಲ್ಲಿ ಪ್ರದರ್ಶನಕ್ಕೆಂದು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ 227 ಕಲಾ ತಂಡಗಳನ್ನು ಆಯ್ಕೆ ಮಾಡಿಕೊಂಡಿತ್ತು. ಈ ತಂಡಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ಕಲಾವಿದರು ತಮ್ಮ ಸ್ವಂತ ಖರ್ಚಿನಲ್ಲಿ ವಾಹನಗಳನ್ನು ಬಾಡಿಗೆ ಪಡೆದು ಹಾವೇರಿಗೆ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ನೆರೆದಿದ್ದ ಲಕ್ಷಾಂತರ ಜನರನ್ನು ರಂಜಿಸಿದ್ದರು.
ಸಮ್ಮೇಳನ ಮುಗಿದು ಒಂದೂವರೆ ತಿಂಗಳಾದರೂ ಕಲಾವಿದರಿಗೆ ಸಂಭಾವನೆ ಸಿಕ್ಕಿರಲಿಲ್ಲ. ಸಂಭಾವನೆಗಾಗಿ ಕಲಾವಿದರು ಜಿಲ್ಲಾಧಿಕಾರಿ ಕಚೇರಿ, ಕಸಾಪ ಕಚೇರಿ ಅಲೆಯುವಂತಾಗಿತ್ತು. ಈ ಕುರಿತು ಫೆ.20ರಂದು ‘ಇನ್ನೂ ಕೈಸೇರದ ಸಂಭಾವನೆ’ ಶೀರ್ಷಿಕೆಯಡಿ ‘ವಿಜಯವಾಣಿ’ ಫೋಕಸ್ ಸ್ಟೋರಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಸಾಂಸ್ಕೃತಿಕ ಸಮಿತಿ ಹಾಗೂ ಜಿಲ್ಲಾಡಳಿತ ಫೆ.23, 24ರಂದು ಕಲಾವಿದರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಿದೆ. 227 ತಂಡಗಳ ಮುಖ್ಯಸ್ಥರಿಗೆ ಒಟ್ಟು 50.17 ಲಕ್ಷ ರೂ. ಜಮೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಯಮದಡಿ ಆಯಾ ಕಲಾವಿದರಿಗೆ ನಿರ್ದಿಷ್ಟ ಮೊತ್ತದ ಸಂಭಾವನೆ ಹಂಚಿಕೆ ಮಾಡಲಾಗಿದೆ ಎಂದು ಡಿಡಿಪಿಯು ಡಾ.ಉಮೇಶಪ್ಪ ತಿಳಿಸಿದ್ದಾರೆ.

ಕೋಟ್:
ಸಮ್ಮೇಳನ ನಡೆದು ಎರಡು ತಿಂಗಳಾಗುತ್ತ ಬಂದರೂ ನಮ್ಮ ಸಂಭಾವನೆ ದೊರೆತಿರಲಿಲ್ಲ. ಈ ಬಗ್ಗೆ ಯಾರೂ ಕೂಡ ಸೂಕ್ತ ಸ್ಪಂದನೆ ನೀಡುತ್ತಿರಲಿಲ್ಲ. ‘ವಿಜಯವಾಣಿ’ ಪತ್ರಿಕೆ ವರದಿ ಪ್ರಕಟವಾದ ಕೂಡಲೇ ನಮ್ಮ ಸಂಭಾವನೆ ಕೈಸೇರಿದೆ. ಪತ್ರಿಕೆ ತಂಡಕ್ಕೆ ಕಲಾವಿದರ ಪರವಾಗಿ ಧನ್ಯವಾದಗಳು.
ಮಂಜುಳಾ ಕೊಪ್ಪದ, ಜಾನಪದ ಕಲಾವಿದೆ, ನೆಗಳೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net