

ಹಾವೇರಿ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮಕ್ಕಳಿಗೆ ಅಗತ್ಯವಾದ ಗುಣಮಟ್ಟದ ಶಿಕ್ಷಣದ ಜತೆಗೆ ಮೌಲ್ಯಯುತ ಸಂಸ್ಕಾರ ಸಿಗುತ್ತದೆ. ಮಕ್ಕಳು ಸುಸಂಸ್ಕೃತ ಸಂಸ್ಕಾರದ ಶಿಕ್ಷಣ ಪಡೆದು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಿದೆ ಎಂದು ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಇಲ್ಲಿನ ರಾಜೇಂದ್ರ ನಗರದಲ್ಲಿ ಶುಕ್ರವಾರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಯ ಆಡಳಿತ ಕಚೇರಿಯನ್ನು ಉದ್ಘಾಟಿಸಿ ಹಾಗೂ 2026-27ನೇ ಸಾಲಿನ ಶಾಲಾ ನೋಂದಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣದ ಜತೆಗೆ ಸಂಸ್ಕಾರ ನೀಡಿದರೆ ಭವ್ಯ ಭಾರತದ ಪ್ರಜೆಗಳ ಜೀವನ ಉಜ್ವಲವಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಿಕ್ಷಣ ಕ್ಷೇತ್ರಕ್ಕೆ ಹೊಸ ದಾಫುಗಾಲು ಇಟ್ಟಿದೆ. ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಮಕ್ಕಳ ಮನಸ್ಸಿನ ಭಾವನೆ ಚಂಚಲಗೊಳಿಸುತ್ತಿದೆ. ಆಧುನಿಕತೆಗೆ ಹೊಂದಿಕೊಂಡಂತೆ ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚುತ್ತಿವೆ. ಅಂಕಗಳನ್ನು ಬೆನ್ನುಹತ್ತಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ರಾಷ್ಟ್ರೋತ್ಥಾನ ಹೆಮ್ಮರವಾಗಲಿ ಎಂದು ಹರಸಿದರು.
ರಾಷ್ಟ್ರೋತ್ಥಾನ ಪರಿಷತ್ ಆಡಳಿತ ಮಂಡಳಿ ಸದಸ್ಯ ಜಯಣ್ಣ ಎಚ್.ಪ್ರಾಸ್ತಾವಿಕವಾಗಿ ಮಾತನಾಡಿ, 60 ವರ್ಷಗಳಿಂದ ರಾಷ್ಟ್ರೋತ್ಥಾನ ಸಂಸ್ಥೆ ವಿವಿಧ ಮಜಲುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದಾಯಕ್ಕೋಸ್ಕರ ಕೆಲಸ ಮಾಡದೇ ಸೇವೆಗೋಸ್ಕರ ನಿರಂತರ ಕೆಲಸ ಮಾಡುತ್ತಿದೆ. 2026ರ ಮೇ ಅಂತ್ಯದೊಳಗೆ ಸುಸಜ್ಜಿತ ವ್ಯವಸ್ಥೆಯೊಂದಿಗೆ ಹಾವೇರಿಯ ವಿದ್ಯಾಕೇಂದ್ರ ಆರಂಭವಾಗಲಿದೆ ಎಂದರು.
ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಶ್ರೀಕಾಂತ ಹುಲಿಮನಿ, ಹಾನಗಲ್ಲ ಆರ್‌ವಿಕೆ ಶಾಲೆಯ ಪ್ರಾಂಶುಪಾಲೆ ಶ್ರೀದೇವಿ ಜಿ., ರಾಷ್ಟ್ರೋತ್ಥಾನದ ಸಿಬ್ಬಂದಿ, ಪಾಲಕರು ಉಪಸ್ಥಿತರಿದ್ದರು.
ಶಾಂಭವಿ ಮಾತಾಜಿ ಪ್ರಾರ್ಥಿಸಿದರು. ಶಶಿಧರ ಬಿರಾದರ ಸ್ವಾಗತಿಸಿದರು. ಅಮೃತ ಎಚ್.ಎಂ., ನಿರೂಪಿಸಿದರು.
ಯಶಸ್ವಿಯಾಗಿ ಮುನ್ನಡೆಯಲಿ
ಇಂದು ಬಹುತೇಕ ಶಿಕ್ಷಣ ಸಂಸ್ಥೆಗಳು ಅಂಕ ಗಳಿಸುವ ಕಾರ್ಖಾನೆಯಾಗಿ ಮಾರ್ಪಟ್ಟಿವೆ. ಆಧುನಿಕ ಶಿಕ್ಷಣ ವ್ಯವಸ್ಥೆ ಪ್ರಭಾವದಿಂದ ಭಾರತೀಯ ಶಿಕ್ಷಣ ವ್ಯವಸ್ಥೆ ದೂರವಾಗುತ್ತಿದೆ. ಸಮಗ್ರ ಹಾಗೂ ಸರ್ವತೋಮುಖ ಶಿಕ್ಷಣ ಪಡೆಯಲು ಆಚಾರ, ವಿಚಾರ, ಭಾರತೀಯ ಜ್ಞಾನ ಪರಂಪರೆ ನೀಡುವಲ್ಲಿ ರಾಷ್ಟ್ರೋತ್ಥಾನ ಪರಿಷತ್ ಯಶಸ್ವಿಯಾಗಿ ಕಾರ್ಯಚಟುವಟಿಕೆ ನಡೆಸುತ್ತಿದೆ. ರಾಜ್ಯದ 19 ರಾಷ್ಟ್ರೋತ್ಥಾನ ಶಾಲೆಗಳಂತೆ ಹಾವೇರಿಯ ದೇವಿಹೊಸೂರ ರಸ್ತೆಯಲ್ಲಿ ಆರಂಭವಾಗುತ್ತಿರುವ 20ನೇ ಶಾಲೆ ಯಶಸ್ವಿಯಾಗಿ ಮುನ್ನಡೆಬೇಕೆಂದು ಉದ್ಯಮಿ ಪವನ ಬಹದ್ದೂರ್ ದೇಸಾಯಿ ತಿಳಿಸಿದರು.